ADVERTISEMENT

ಅಲ್ಪಸಂಖ್ಯಾತರ ಓಲೈಕೆಗಾಗಿ ಲ್ಯಾಂಡ್ ಜಿಹಾದ್: ಆರ್. ಅಶೋಕ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 16:21 IST
Last Updated 4 ನವೆಂಬರ್ 2024, 16:21 IST
ಶಾಸಕ ಬೈರತಿ ಬಸವರಾಜು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರ್.ಅಶೋಕ ಪಾಲ್ಗೊಂಡಿದ್ದರು
ಶಾಸಕ ಬೈರತಿ ಬಸವರಾಜು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರ್.ಅಶೋಕ ಪಾಲ್ಗೊಂಡಿದ್ದರು   

ಕೆ.ಆರ್.ಪುರ: ‘ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಸರ್ಕಾರ ‌ಲ್ಯಾಂಡ್ ಜಿಹಾದ್ ಹೆಸರಿನಲ್ಲಿ ನಮ್ಮ ಅನ್ನದಾತರ ಜಮೀನು ಕಬಳಿಸಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.

‘ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ವಿವಾದಕ್ಕೆ ಮೂಲ ಕಾರಣರಾದ ಸಚಿವ ಜಮೀರ್ ಅಹಮ್ಮದ್ ಅವರೂ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಕೆ.ಆರ್.ಪುರದಲ್ಲಿ ಹಮ್ಮಿಕೊಂಡಿದ್ದ ವಕ್ಫ ಮಂಡಳಿ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ 1975ರಲ್ಲಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿದ್ದರಿಂದ, ರಾಜ್ಯದಲ್ಲಿ ಇಂಥ ಪರಿಸ್ಥಿತಿ ಉದ್ಭವಿಸಿದೆ. ರೈತರ ಜಮೀನಿನ ಪಹಣಿ ಮತ್ತು ಖಾತೆಗಳನ್ನು ತಿದ್ದುವ ಅವಕಾಶ ಕಲ್ಪಿಸಿದರಿಂದ ಸಚಿವ ಜಮೀರ್ ಅಹಮ್ಮದ್ ಎಲ್ಲಾ ಜಿಲ್ಲೆಗಳಲ್ಲಿ ಸಾಬರ ಆದಾಲತ್ ಮಾಡಿ ಎಲ್ಲಾ ರೈತರ ಜಮೀನಿಗೆ ನೋಟಿಸ್ ನೀಡಿರುವುದು ಆಕ್ಷಮ್ಯ ಎಂದು ಅವರು ಖಂಡಿಸಿದರು. 

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟಿಸ್ ವಾಪಸ್ ಪಡೆದಿದ್ದೇವೆ ಎಂದು ಹೊಸ ನಾಟಕ ಶುರು ಮಾಡಿದ್ದಾರೆ. ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯ ಮಾತು ನಂಬುವ ಸ್ಥಿತಿಯಲ್ಲಿ ಬಿಜೆಪಿಯೂ ಇಲ್ಲ, ಜನರೂ ಇಲ್ಲ’ ಎಂದು ತಿರುಗೇಟು ನೀಡಿದರು. 

ಶಾಸಕ ಬೈರತಿ ಬಸವರಾಜು ನೇತೃತ್ವದಲ್ಲಿ ಕೆ.ಆರ್.ಪುರ ಬಿಬಿಎಂಪಿ ಕಚೇರಿಯಿಂದ ತಾಲ್ಲೂಕು ಕಚೇರಿಯವರಗೆ ಪಾದಯಾತ್ರೆ ನಡೆಸಿ ವಿಶೇಷ ತಹಶೀಲ್ದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ, ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ, ನಗರ ಉತ್ತರ ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಾಕ್ಸರ್ ನಾಗರಾಜ್, ಕೆ.ಆರ್.ಪುರ ಮಂಡಲ ಅಧ್ಯಕ್ಷ ಮುನೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್, ವಿ.ಸುರೇಶ್, ಸಿದ್ದಲಿಂಗಯ್ಯ ಮುಖಂಡರಾದ ಲೋಕೇಶ್, ಮಾರ್ಕೆಟ್ ರಮೇಶ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.