ಬೆಂಗಳೂರು: ಚೊಕ್ಕನಹಳ್ಳಿ ಬಳಿಯ ಆಸ್ತಿ ಕಬಳಿಸಲು ಯತ್ನಿಸಿದ ಪ್ರಕರಣ ಸಂಬಂಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಇತರರ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಆರ್.ಟಿ. ನಗರದ ಶಾಹೀತಾ ನಾಜೀನ್ ಎಂಬುವರು ಜಮೀರ್ ಅಹ್ಮದ್ ಖಾನ್ ಹಾಗೂ ಇತರರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ನಾಜೀನಾ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಇತ್ತೀಚೆಗೆ ನಿರ್ದೇಶನ ನೀಡಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
'ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ), ಹಲ್ಲೆ (ಐಪಿಸಿ 323), ಲೈಂಗಿಕ ಕಿರುಕುಳ (ಐಪಿಸಿ 354), ವಂಚನೆ (ಐಪಿಸಿ 420), ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427), ಅತಿಕ್ರಮ ಪ್ರವೇಶ (ಐಪಿಸಿ 447), ಅಪರಾಧ ಸಂಚು (ಐಪಿಸಿ 503), ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಮೀರ್ ಅಹ್ಮದ್ ಖಾನ್ (49), ಅವರ ಸಹೋದರ ಜಮೀಲ್ (51), ಅತೀಕ್ ಕಾವರ್ (44) ಹಾಗೂ ಇತರರನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದೂ ತಿಳಿಸಿದರು.
ಪ್ರಕರಣದ ವಿವರ: ‘ದೂರುದಾರ ಶಾಹೀತಾ ನಾಜೀನ್ ಅವರ ಪತಿ ವಿದೇಶದಲ್ಲಿದ್ದಾರೆ. ಜಮೀರ್ ಅಹ್ಮದ್ ಖಾನ್ ಕುಟುಂಬಕ್ಕೆ ಸಂಬಂಧಪಟ್ಟ ಚೊಕ್ಕನಹಳ್ಳಿ ಬಳಿಯ ಆಸ್ತಿಯನ್ನು ನಾಜೀನ್ ದಂಪತಿ ಕಾನೂನುಬದ್ಧವಾಗಿ ಖರೀದಿಸಿದ್ದರು. ಆಗಸ್ಟ್ 4ರಂದು ನಾಜೀನ್ ಹಾಗೂ ಅವರ ಮಗ, ಜಾಗದಲ್ಲಿ ಶೆಡ್ ನಿರ್ಮಿಸುತ್ತಿದ್ದರು. ಜೆಸಿಬಿ ಯಂತ್ರ ಹಾಗೂ ಬುಲ್ಡೋಜರ್ ಸಮೇತ ಅತಿಕ್ರಮ ಪ್ರವೇಶ ಮಾಡಿದ್ದ ಆರೋಪಿಗಳು, ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದರೆಂಬ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.
’ಆರೋಪಿಗಳು ಬಸ್‌ಗಳನ್ನು ಜಾಗದಲ್ಲಿ ನಿಲ್ಲಿಸಿದ್ದರು. ನಾಜೀನ್ ಅವರನ್ನು ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದರೆಂಬ ಆರೋಪ ಇದೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.