ಬೆಂಗಳೂರು: ‘ಲಂಕೇಶ್ ಅವರದ್ದು ಸಂಕೀರ್ಣ ವ್ಯಕ್ತಿತ್ವ. ಅವರ ಬಗ್ಗೆ ಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಯಾರಾದರೂ ಅವರ ಬಗ್ಗೆ ಗೊತ್ತು ಅಂದರೆ, ಕುರುಡರು ಆನೆಯನ್ನು ಮುಟ್ಟಿನೋಡಿ ಬಣ್ಣಿಸಿದಂತೆ, ಬೊಗಸೆ ನೀರು ಹಿಡಿದು ಸಮುದ್ರದ ಬಗ್ಗೆ ಮಾತನಾಡಿದಂತೆ ಆಗುತ್ತದೆ. ಅವರನ್ನು ಈಗಲೂ ಶೋಧಿಸುತ್ತಿದ್ದೇವೆ...’
–ಹೀಗೆ ಮನದಾಳ ಹಂಚಿಕೊಂಡವರು ಪಿ. ಲಂಕೇಶ್ ಅವರ ಒಡನಾಡಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ‘ಲಂಕೇಶ್ ಬಹುತ್ವಗಳ ಶೋಧ’ ಅಧ್ಯಯನ ಶಿಬಿರದ ಎರಡನೇ ದಿನವಾದ ಮಂಗಳವಾರವೂ ಲಂಕೇಶ್ ಅವರ ಕುರಿತು ವಿವಿಧ ಗೋಷ್ಠಿಗಳು ನಡೆದವು.
‘ಎಲ್ಲಿದ್ದೆ ಇಲ್ಲಿತಂಕ’ ಗೋಷ್ಠಿಯಲ್ಲಿ ಮಾತನಾಡಿದ ಲೇಖಕಿ ಪ್ರತಿಭಾ ನಂದಕುಮಾರ್, ‘ಲಂಕೇಶ್ ಅವರನ್ನು ಒಟ್ಟಾಗಿ ಗ್ರಹಿಸಲು ನನಗೂ ಸೇರಿ ಯಾರಿಗೂ ಸಾಧ್ಯವಾಗಿಲ್ಲ. ಅವರ ಲಂಕೇಶ್ ಪತ್ರಿಕೆಯ ಎರಡನೇ ಪುಟದಲ್ಲಿ ಪ್ರಕಟಿಸುತ್ತಿದ್ದ ಅಂಕಣ ಬರಹದಲ್ಲಿ ನನಗೂ ಅವಕಾಶ ನೀಡಿದ್ದರು. ಸ್ತ್ರೀವಾದ, ಪತಿವ್ರತೆ ಸೇರಿ ವಿವಿಧ ವಿಷಯಗಳ ಬಗ್ಗೆ ಅವರು ಅಂಕಣ ಬರೆಸಿದರು. ನನಗೆ ಒಂದು ಗುರುತು ನೀಡಿದ್ದೇ ಲಂಕೇಶ್ ಪತ್ರಿಕೆ ಹಾಗೂ ಲಂಕೇಶ್. ಅವರ ಬಳಿ ಖರೀದಿಸಿದ ಸಂಗೀತ ಪರಿಕರ ಹಾಗೂ ಅವರು ಕೊಡಿಸಿದ ಬ್ಯಾಗ್ ಈಗಲೂ ನನ್ನ ಬಳಿಯಿದೆ. ಅವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು.
ಲಂಕೇಶ್ ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದ ಕವಿ ಸುಬ್ಬು ಹೊಲೆಯಾರ್, ‘ಇಡೀ ಕರ್ನಾಟಕದ, ಈ ಸಮಾಜದ ಕಣ್ಣು ತೆರೆಸಿದ್ದು ಲಂಕೇಶ್. ಕನ್ನಡಿಗರ ಮನಸ್ಸನ್ನು ಅವರು ಪ್ರೇರೆಪಿಸಿದರು. ಬಸವಣ್ಣ, ಕುವೆಂಪು ಹಾಗೂ ಸಂವಿಧಾನದ ಆಶಯವನ್ನು ಅವರು ಎದೆಗೆ ಒತ್ತಿಕೊಂಡಿದ್ದರು. ಸದಾ ನಿಶ್ಯಕ್ತರ ಪರವಾಗಿ ಅವರು ನಿಲ್ಲುತ್ತಿದ್ದರು. ಇಷ್ಟಾಗಿಯೂ ಕನ್ನಡ ಸಾಹಿತ್ಯವು ಮತ್ತೆ ಮತ್ತೆ ಇಂತಹವರನ್ನು ದೂರ ಇಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಲಂಕೇಶ್ ಅವರ ಒಡನಾಡಿ ಮೂಡಲಗಿರಿಯಪ್ಪ, ‘ಕೆಲಸ ಇಲ್ಲದೆ ಅಲೆಯುತ್ತಿದ್ದಾಗ ಸ್ನೇಹಿತನೊಬ್ಬ ಅವರ ಬಳಿ ಕೆಲಸಕ್ಕೆ ನನ್ನನ್ನು ಸೇರಿಸಿದ. 16 ವರ್ಷಗಳು ಅವರ ಜತೆಯಲ್ಲಿದ್ದೆ. ಮನೆಗೆ ಮುಂಗಡ ಹಣ ಪಾವತಿಸುವಾಗ, ಮಕ್ಕಳನ್ನು ಶಾಲೆಗೆ ಸೇರಿಸುವಾಗ ಇಂಥ ಹಲವು ಸಂದರ್ಭಗಳಲ್ಲಿ ಆರ್ಥಿಕ ಸಹಾಯ ಮಾಡುವ ಮೂಲಕ ಅವರು ನೆರವಾಗಿದ್ದರು’ ಎಂದು ಸ್ಮರಿಸಿಕೊಂಡರು.
ಅಧ್ಯಯನ ಶಿಬಿರದ ನಿರ್ದೇಶಕಿಯೂ ಆಗಿರುವ ಲೇಖಕಿ ಎಂ.ಎಸ್. ಆಶಾದೇವಿ, ‘ಲಂಕೇಶ್ ಪತ್ರಿಕೆಯಲ್ಲಿ ಮಹಿಳೆಯರಿಗೂ ಹೆಚ್ಚಿನ ಅವಕಾಶ ನೀಡಲಾಗಿತ್ತು. ಇದರಿಂದ ಹಲವು ಲೇಖಕಿಯರು ಸಾಹಿತ್ಯ ಲೋಕದಲ್ಲಿ ಪರಿಚಿತರಾದರು. ಲೇಖಕಿಯರಿಗೂ ಈ ಪತ್ರಿಕೆ ಜಗತ್ತನ್ನು ಕಾಣಿಸಿಕೊಟ್ಟಿತು. ಅವರು ತನ್ನ ಜತೆಯಲ್ಲಿನ ಎಲ್ಲ ಲೇಖಕ ಹಾಗೂ ಲೇಖಕಿಯರಿಗೆ ನೈತಿಕ ಬಲ ತುಂಬಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.