ಬೆಂಗಳೂರು: ಲಂಕೇಶ್ ಅವರ ಬರವಣಿಗೆಗೆ ಸರ್ಕಾರ ಬದಲಿಸುವ ಶಕ್ತಿ ಇತ್ತು. ಅವರು ಯಾವುದೇ ಸಿದ್ಧಾಂತಗಳಿಗೆ ಕಟ್ಟು ಬಿದ್ದು ಕೆಲಸ ಮಾಡು ತ್ತಿರಲಿಲ್ಲ ಎಂದು ವಕೀಲ ಸಿ.ಎಚ್.ಹನುಮಂತರಾಯ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸೋಮವಾರ ಆಯೋಜಿಸಿದ್ದ ‘ಲಂಕೇಶ್ ಬಹುತ್ವಗಳ ಶೋಧ: ಅಧ್ಯಯನ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು, ‘ಬರವಣಿಗೆಯಲ್ಲಿ ಅಸಾಮಾನ್ಯ ನೋಟ ಮತ್ತು ಶಕ್ತಿ ಇತ್ತು. ಅವರು ಯಾವತ್ತೂ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ಹಾಗಾಗಿಯೇ ಅವರು ಬರವಣಿಗೆಯಲ್ಲಿ ಗುಣಮಟ್ಟ, ಶಕ್ತಿ ಉಳಿಸಿಕೊಂಡಿದ್ದರು’ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ‘ನನ್ನ ಒಳಗಿನ ಬದಲಾವಣೆಗೆ ಅರಿವು ತುಂಬಿದವರು ಲಂಕೇಶ್ ಗುರುಗಳು. ವಯಸ್ಸಿನ ತಾರತಮ್ಯ ಇಲ್ಲದೇ ಅವರ ತಪ್ಪು ಅನ್ನು ಗುರುತಿಸಿ, ಹೇಳಿದರೆ ತಿದ್ದಿಕೊಳ್ಳುವ ಗುಣ ಇತ್ತು. ಉತ್ತಮ ಲೇಖನಗಳು ಪ್ರಕಟವಾಗುತ್ತಿದ್ದವು’ ಎಂದರು.
ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಪತ್ರಿಕೆಯಲ್ಲಿ ನನಗೆ ಮೊದಲು ಬರೆಯುವ ಅವಕಾಶ ನೀಡಿದವರು ಲಂಕೇಶ್. ಬರವಣಿಗೆ ಆರಂಭಿಸುತ್ತಿದ್ದಂತೆ ನನಗೆ ಹೋರಾಟದ ಮನೋಭಾವ ಬಂತು. ಗುಣಮಟ್ಟದ ಹಾಗೂ ಅರ್ಥಪೂರ್ಣ ಲೇಖನಗಳನ್ನು ಬರೆಯುವಂತೆ ಅವರು ಪ್ರೋತ್ಸಾಹಿಸು ತ್ತಿದ್ದರು. ಅವರ ಪತ್ರಿಕೆಯಲ್ಲಿ ಲೇಖನ ಬರೆದವರಿಗೆ ಯಾರಾದರೂ ಬೆದರಿಕೆ ಹಾಕಿದರೆ, ಲಂಕೇಶ್ ಹೆಸರು ಹೇಳುವಂತೆ ಧೈರ್ಯ ತುಂಬುತ್ತಿದ್ದರು’ ಎಂದು ನೆನಪಿಸಿಕೊಂಡರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಮಾತನಾಡಿದರು.
ನಂತರ ನಡೆದ ಗೋಷ್ಠಿಯಲ್ಲಿ ‘ಲಂಕೇಶರ ಬದುಕು–ಬರಹ’ ಕುರಿತು ಅಗ್ರ ಹಾರ ಕೃಷ್ಣಮೂರ್ತಿ, ‘ನನ್ನವ್ವ ಫಲವತ್ತಾದ ಕಪ್ಪು ನೆಲ’ ಕುರಿತು ಎಂ.ಎಸ್.ಆಶಾದೇವಿ ಹಾಗೂ ‘ಮುಸ್ಸಂಜೆಯ ಪ್ರಸಂಗ
ಗಳಲ್ಲಿ’ ಬಗ್ಗೆ ಅಮರೇಶ ನುಗಡೋಣಿ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.