ಬೆಂಗಳೂರು: ಪಾಲಿಕೆ ಆವರಣದ ಆದಿಶಕ್ತಿ ದೇವಸ್ಥಾನದ ಬಳಿ ಹೂವು ಮಾರುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ ಲ್ಯಾಪ್‌ಟಾಪ್ ಕೊಡಿಸುವ ಭರವಸೆ ನೀಡಿದ್ದಾರೆ.
16 ವರ್ಷದ ಬನಶಂಕರಿ ಎಂಬ ವಿದ್ಯಾರ್ಥಿನಿ ತನ್ನ ಶಿಕ್ಷಣದೊಂದಿಗೆ ಜೀವನ ನಿರ್ವಹಣೆಗಾಗಿ ಐದು ವರ್ಷಗಳಿಂದ ಹೂವು ಮಾರುತ್ತಿದ್ದರು. ಈ ವಿಚಾರ ತಿಳಿದ ಆಯುಕ್ತರು ದೇವಸ್ಥಾನದ ಬಳಿಗೆ ಮಂಗಳವಾರ ತೆರಳಿ, ವಿದ್ಯಾರ್ಥಿಯನ್ನು ವಿಚಾರಿಸಿದರು.
ಜೀವನ ನಿರ್ವಹಣೆಗಾಗಿ ಹೂವು ಮಾರಾಟ ಹಾಗೂ ಜೊತೆಯಲ್ಲೇ ಶಿಕ್ಷಣ ಮುಂದುವರಿಸುತ್ತಿದ್ದೇನೆ. ಬಡ ಕುಟುಂಬ ಆಗಿರುವುದರಿಂದ ಆನ್‌ಲೈನ್ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಇರುವುದಾಗಿ ವಿದ್ಯಾರ್ಥಿನಿ ಆಯುಕ್ತರಿಗೆ ತಿಳಿಸಿದರು. ವಿದ್ಯಾರ್ಥಿನಿಯ ಸಂಕಷ್ಟ ಆಲಿಸಿದ ಗೌರವ ಗುಪ್ತ, ಆನ್‌ಲೈನ್ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್‌ಟಾಪ್ ಕೊಡಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಬನಶಂಕರಿ, ‘ತಂದೆ ಮಗ್ಗ ನೇಯುವ ಕೆಲಸ ಹಾಗೂ ತಾಯಿ ನನ್ನ ಕೆಲಸಕ್ಕೆ ಸಹಾಯ ಮಾಡುತ್ತಿದ್ದು, ಮಾರುಕಟ್ಟೆಯಿಂದ ಹೂವು ತಂದು ಕೊಡುತ್ತಾರೆ. ಜುಲೈ 19ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಮಧ್ಯಾಹ್ನದವರೆಗೆ ಹೂವು ಮಾರಾಟ ಮಾಡಿ, ನಂತರ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆಯುಕ್ತರು ಲ್ಯಾಪ್‌ಟಾಪ್ ಕೊಡಿಸುವುದಾಗಿ ತಿಳಿಸಿರುವುದು ಸಂತಸ ತಂದಿದೆ. ಅವರಿಗೆ ಧನ್ಯವಾದ’ ಎಂದು ತಿಳಿಸಿದ್ದಾರೆ.
‘ಈ ಉತ್ತಮ ಕಾರ್ಯ ಮಾಡಿರುವ ಪಾಲಿಕೆ ಆಯುಕ್ತರಿಗೆ ಧನ್ಯವಾದಗಳು’. ಈ ಬಗ್ಗೆ ಖುದ್ದಾಗಿ ಗುಪ್ತ ಅವರಿಗೆ ಕರೆ ಮಾಡಿ ಧನ್ಯವಾದ ತಿಳಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.