ADVERTISEMENT

ಬೆಂಗಳೂರು | 24 ಲ್ಯಾಪ್‌ಟಾಪ್‌ ಕಳ್ಳತನ: ಪದವೀಧರೆ ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:27 IST
Last Updated 26 ಮಾರ್ಚ್ 2024, 14:27 IST
ಆರೋಪಿಯಿಂದ ಜಪ್ತಿ ಮಾಡಲಾದ ಲ್ಯಾಪ್‌ಟಾಪ್‌ಗಳನ್ನು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಮಂಗಳವಾರ ವೀಕ್ಷಿಸಿದರು 
ಆರೋಪಿಯಿಂದ ಜಪ್ತಿ ಮಾಡಲಾದ ಲ್ಯಾಪ್‌ಟಾಪ್‌ಗಳನ್ನು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಮಂಗಳವಾರ ವೀಕ್ಷಿಸಿದರು     

ಬೆಂಗಳೂರು: ನಗರದ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಜಶು ಅಗರವಾಲ್ (29) ಎಂಬುವವರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನ್‌ದ ಜಶು, ಎಂಜಿನಿಯರಿಂಗ್ ಪದವೀಧರೆ. ಮೂರು ವರ್ಷಗಳಿಂದ ಕೃತ್ಯ ಎಸಗುತ್ತಿದ್ದರು. ಇತ್ತೀಚೆಗೆ ಇವರನ್ನು ಬಂಧಿಸಿ, ₹ 10 ಲಕ್ಷ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಜಶು, ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ನೋಯ್ಡಾದ ಬ್ಯಾಂಕ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ವೇತನ ಕಡಿಮೆ ಇದ್ದಿದ್ದರಿಂದ, ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬೆಂಗಳೂರಿನ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಹಲವು ಕಡೆ ಸಂದರ್ಶನ ನೀಡಿದರೂ ಕೆಲಸ ಸಿಕ್ಕಿರಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ಸಂದರ್ಶನಕ್ಕೆಂದು ವಿಮಾನದಲ್ಲಿ ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿ, ಬೆಳ್ಳಂದೂರು, ವೈಟ್‌ಫೀಲ್ಡ್ ಸಿಲ್ಕ್ ಬೋರ್ಡ್, ಮಹದೇವಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ವಾಸವಿರುತ್ತಿದ್ದರು. ಯುವತಿಯರು ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕೊಠಡಿಗೆ ಹೋಗಿ ಲ್ಯಾಪ್‌ಟಾಪ್ ಕದಿಯುತ್ತಿದ್ದರು.’

‘ಕದ್ದ ಲ್ಯಾಪ್‌ಟಾಪ್‌ಗಳನ್ನು ಸ್ಥಳೀಯ ಮಳಿಗೆಗಳಲ್ಲಿ ಮಾರುತ್ತಿದ್ದರು. ಅದರಿಂದ ಬಂದ ಹಣವನ್ನು ತಮ್ಮ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಆರೋಪಿ ಇತ್ತೀಚೆಗೆ ನಗರಕ್ಕೆ ಪುನಃ ಬಂದಿದ್ದರು. ಹುಣಸಮಾರನಹಳ್ಳಿ ಬಳಿ ಅವರನ್ನು ಬಂಧಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.