ADVERTISEMENT

ಫುಡ್‌ ಡೆಲಿವರಿ ಸೋಗಿನಲ್ಲಿ ಲ್ಯಾಪ್‌ಟಾಪ್‌ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:04 IST
Last Updated 5 ನವೆಂಬರ್ 2024, 16:04 IST
ನವೀನ್‌ ರೆಡ್ಡಿ 
ನವೀನ್‌ ರೆಡ್ಡಿ    

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ಗಳಿಗೆ(ಪಿ.ಜಿ) ನುಗ್ಗಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ ಫೋನ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನವೀನ್ ರೆಡ್ಡಿ(30) ಬಂಧಿತ.

ಆರೋಪಿಯಿಂದ ₹10 ಲಕ್ಷ ಮೌಲ್ಯದ, ವಿವಿಧ ಕಂಪನಿಗಳ 16 ಲ್ಯಾಪ್‌ಟಾಪ್‌ ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್‌ ಪದವಿ ಪಡೆದಿದ್ದ ನವೀನ್ ರೆಡ್ಡಿ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಬೆಳ್ಳಂದೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದ. ಆದರೆ, ಯಾವುದೇ ಕೆಲಸ ಸಿಕ್ಕಿರಲಿಲ್ಲ. ಬಳಿಕ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಪಿ.ಜಿಗೆ ಫುಡ್ ಡೆಲಿವರಿ ಸೋಗಿನಲ್ಲಿ ಹೋಗಿ, ಯಾರೂ ಇಲ್ಲದ ವೇಳೆ ಲ್ಯಾಪ್‌ಟಾಪ್‌ ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದ’ ಎಂದು ಪೊಲೀಸರು ತಿಳಿಸಿದರು.

ಅ.29ರಂದು ನಸುಕಿನಲ್ಲಿ ಪಿ.ಜಿಯಿಂದ ಆರೋಪಿ ಹೊರಗಡೆ ಬರುತ್ತಿದ್ದ. ಅದೇ ವೇಳೆ ಠಾಣೆಯ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆರೋಪಿಯ ಬ್ಯಾಗ್‌ನಲ್ಲಿ 16 ಲ್ಯಾಪ್‌ಟಾಪ್‌ಗಳು ಪತ್ತೆ ಆಗಿದ್ದವು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿ ಲ್ಯಾಪ್‌ಟಾಪ್‌ ಕಳ್ಳತನ ಮಾಡಿರುವುದಾಗಿ ಹೇಳಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.