ADVERTISEMENT

ಜಾಗತಿಕ ಕಾನೂನು ಕೌಶಲ ಅಕಾಡೆಮಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 19:44 IST
Last Updated 28 ಡಿಸೆಂಬರ್ 2023, 19:44 IST
ಎಂ.ಎಸ್. ರಾಮಯ್ಯ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ (ಎಡದಿಂದ) ಉಮಾಮಹೇಶ್, ಎಂ.ಆರ್. ಆನಂದರಾಮ್, ಬಿ.ವಿ. ನಾಗರತ್ನ, ಎಂ.ಆರ್. ಜಯರಾಂ, ಬಿ.ಎಸ್. ರಾಮಪ್ರಸಾದ್ ಭಾಗವಹಿಸಿದ್ದರು.
ಎಂ.ಎಸ್. ರಾಮಯ್ಯ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ (ಎಡದಿಂದ) ಉಮಾಮಹೇಶ್, ಎಂ.ಆರ್. ಆನಂದರಾಮ್, ಬಿ.ವಿ. ನಾಗರತ್ನ, ಎಂ.ಆರ್. ಜಯರಾಂ, ಬಿ.ಎಸ್. ರಾಮಪ್ರಸಾದ್ ಭಾಗವಹಿಸಿದ್ದರು.   

ಬೆಂಗಳೂರು: ‘ಕಾನೂನು ಶಾಲೆಗಳು ಸಂಸತ್ತು ಮತ್ತು ರಾಜ್ಯ ಶಾಸಕಾಂಗಕ್ಕೆ ಸಲಹೆ ನೀಡಲು ಅಗತ್ಯವಿರುವ ಕಾನೂನುಗಳ ಸಂಶೋಧನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು.

ರಾಮಯ್ಯ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ‘ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಜಾಗತಿಕ ಕಾನೂನು ಕೌಶಲ ಅಕಾಡೆಮಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾನೂನು ತಜ್ಞರು ಅಂತರ್ಜಾಲ ಮತ್ತು ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆ ಕೈಗೊಳ್ಳಬೇಕು. ಇದರಿಂದ, ಶೀಘ್ರವಾಗಿ ಮಾಹಿತಿ ದೊರೆಯುವುದರಿಂದ ವ್ಯಾಜ್ಯ ಪ್ರಕರಣಗಳ ಇತ್ಯರ್ಥ ಮಾಡಲು ಅನುಕೂಲವಾಗಲಿದೆ’ ಎಂದರು.

ADVERTISEMENT

‌ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್. ಜಯರಾಂ, ‘ರಾಜ್ಯದಲ್ಲಿ ಪ್ರತಿವರ್ಷ 1.2 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರ ಬರುತ್ತಾರೆ. ಆದರೆ, ಕೇವಲ 19 ಸಾವಿರ ಜನರಿಗೆ ಮಾತ್ರ ಉದ್ಯೋಗ ದೊರೆಯುತ್ತದೆ. ಪದವಿಗಿಂತ ಕೌಶಲ ಬಹಳ ಮುಖ್ಯವಾಗಿದೆ. ಕಾನೂನು ಕ್ಷೇತ್ರದಲ್ಲಿ ಕೌಶಲ ನೀಡುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಕೌಶಲ ಅಕಾಡೆಮಿ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ. ವೆಂಕಟಾಚಲಯ್ಯ, ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್. ಆನಂದರಾಮ್, ಪ್ರಾಂಶುಪಾಲ ಉಮಾಮಹೇಶ್ ಎಸ್., ಗೋಕುಲ ಶಿಕ್ಷಣ ಪ್ರತಿಷ್ಠಾನದ ಹಣಕಾಸು ವಿಭಾಗದ ಮುಖ್ಯಸ್ಥ ರಾಮಚಂದ್ರ ಜಿ., ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್. ರಾಮಪ್ರಸಾದ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.