ADVERTISEMENT

ಕಾನೂನು ವಿವಿ: ಪರಿಶೀಲನಾ ಸಮಿತಿ ಕಾರ್ಯಾಚರಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 0:30 IST
Last Updated 25 ಜುಲೈ 2023, 0:30 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿಯು ರಾಜ್ಯದ ಕಾನೂನು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ನಡೆಸುವುದಕ್ಕೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ.

ಈ ಸಂಬಂಧ ವಿವಿ ಸಿಂಡಿಕೇಟ್ ಸದಸ್ಯ ಬಿ.ಜಿ. ರವಿ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಿದೆ.

ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ADVERTISEMENT

ಅರ್ಜಿಯಲ್ಲಿ ಏನಿದೆ?: ಹೊಸ ಕಾನೂನು ಕಾಲೇಜುಗಳ ಮಾನ್ಯತೆ ಮಂಜೂರು ಮಾಡಲು ಕೋರಿದ ಅರ್ಜಿ ಮತ್ತು ಮಾನ್ಯತೆ ನವೀಕರಣಕ್ಕೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ, ಸದಸ್ಯರೊಂದಿಗೆ ಚರ್ಚಿಸಿದ ನಂತರ ನಿರ್ಧಾರ ಪಡೆದುಕೊಳ್ಳಬೇಕಿದೆ. ಆದರೆ, ಕಳೆದ ಆರು ತಿಂಗಳಿಂದಲೂ ವಿವಿ ಕುಲಪತಿಗಳು ಸಿಂಡಿಕೇಟ್ ಸಭೆ ನಡೆಸಿಲ್ಲ.

ಅಲ್ಲದೆ, ಕಾಲೇಜುಗಳ ಪರಿಶೀಲನೆಗೆ ಸ್ಥಳೀಯ ಪರಿಶೀಲನಾ ಸಮಿತಿ ರಚಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ, 2023ರ ಜುಲೈ 11ರಂದು ಕುಲಪತಿ ನೇಮಕ ಮಾಡಿರುವ ಸ್ಥಳೀಯ ಪರಿಶೀಲನಾ ಸಮಿತಿ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಸಮಿತಿಯ ಕಾರ್ಯ ನಿರ್ವಹಣೆಗೆ ನಿರ್ಬಂಧ ಹೇರಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.