ADVERTISEMENT

ವಾಲಿದ ವಸತಿ ಸಮುಚ್ಚಯ; ಪಾಯದಲ್ಲಿ ಸಮಸ್ಯೆ

ಪೊಲೀಸ್ ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ l ‘ಬಿ’ ಬ್ಲಾಕ್‌ ಕಟ್ಟಡದ ಅರ್ಧ ಭಾಗದಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:14 IST
Last Updated 17 ಅಕ್ಟೋಬರ್ 2021, 19:14 IST
ಬಿನ್ನಿ ಮಿಲ್ ಬಳಿ ಇರುವ ಪೊಲೀಸ್ ವಸತಿ ಸಮುಚ್ಚಯ – ಪ್ರಜಾವಾಣಿ ಚಿತ್ರ
ಬಿನ್ನಿ ಮಿಲ್ ಬಳಿ ಇರುವ ಪೊಲೀಸ್ ವಸತಿ ಸಮುಚ್ಚಯ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿನ್ನಿ ಮಿಲ್ ಬಳಿ ನಿರ್ಮಿಸಲಾಗಿರುವ ಏಳು ಮಹಡಿಯ ಪೊಲೀಸ್ ವಸತಿ ಸಮುಚ್ಚಯದ ‘ಬಿ’ ಬ್ಲಾಕ್‌ ಕಟ್ಟಡದ ಅರ್ಧ ಭಾಗ ವಾಲಿದ್ದು, ಪಾಯದಲ್ಲಿ ಉಂಟಾಗಿರುವ ಸಮಸ್ಯೆಯೇ ಇದಕ್ಕೆ ಕಾರಣವೆಂದು ತಜ್ಞರು ಅನುಮಾನಪಟ್ಟಿದ್ದಾರೆ.

ಏಳು ಮಹಡಿ ಕಟ್ಟಡವನ್ನು ಎ, ಬಿ ಹಾಗೂ ಸಿ ಬ್ಲಾಕ್ ಎಂಬುದಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಬ್ಲಾಕ್‌ ಕಟ್ಟಡಗಳ ನಡುವೆ ಅಂತರ ಬಿಡಲಾಗಿದೆ. ಈ ಪೈಕಿ ಬಿ ಬ್ಲಾಕ್‌ ಕಟ್ಟಡದ ಅರ್ಧ ಭಾಗದಲ್ಲಿ ಮಾತ್ರ ಬಿರುಕು ಕಾಣಿಸಿಕೊಂಡಿದ್ದು, 6 ಇಂಚಿನಷ್ಟು ಕಟ್ಟಡ ವಾಲಿದೆ.

ಪೊಲೀಸ್ ಗೃಹ ಮಂಡಳಿಯ ತಾಂತ್ರಿಕ ಸಮಿತಿ ತಜ್ಞರು ನೀಡಿದ್ದ ವರದಿಯಂತೆ 32 ಪೊಲೀಸ್ ಕುಟುಂಬಗಳ ಸ್ಥಳಾಂತರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಪ್ರತಿಯೊಂದು ಕುಟುಂಬಕ್ಕೆ ಅನ್ನಪೂರ್ಣೇಶ್ವರಿನಗರ ಬಳಿಯ ವಸತಿ ಸಮುಚ್ಚಯದಲ್ಲಿ ಮನೆಗಳ ಹಂಚಿಕೆ ಮಾಡಿ ಶನಿವಾರ ರಾತ್ರಿಯೇ ಆದೇಶ ಪ್ರತಿ ಸಹ ನೀಡಲಾಗಿದೆ. ತ್ವರಿತವಾಗಿ ಮನೆ ಖಾಲಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಆದರೆ, ಈ ಆದೇಶ ಪೊಲೀಸ್ ಕುಟುಂಬದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಕ್ಕಳು, ವೃದ್ಧರನ್ನು ಕರೆದುಕೊಂಡು ತ್ವರಿತವಾಗಿ ಮನೆ ಖಾಲಿ ಮಾಡುವುದು ಹೇಗೆ ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

‘2020ರಿಂದಲೇ ಕಟ್ಟಡದಲ್ಲಿ ಬಿರುಕು ನೋಡುತ್ತಿದ್ದೇವೆ. ಕಟ್ಟಡದ ತುದಿಯಲ್ಲಿ ಬಿರುಕು ಇದ್ದು,
ಒಂದೂ ಮನೆಗೂ ಹಾನಿಯಾಗಿಲ್ಲ. ದೊಡ್ಡ ಅನಾಹುತವೇ ಸಂಭವಿಸಿದ ರೀತಿಯಲ್ಲಿ ಬಿಂಬಿಸಲಾಗುತ್ತಿದ್ದು, ದಿಢೀರ್ ಮನೆ ಖಾಲಿ ಮಾಡುವುದು ಹೇಗೆ?’ ಎಂದು ಕುಟುಂಬದವರು ಹೇಳಿದರು.

‘ನಮ್ಮಲ್ಲಿ ಶಾಲಾ ಮಕ್ಕಳು ಹೆಚ್ಚಿದ್ದಾರೆ. ಅ. 21ರಿಂದ ಶಾಲೆಗಳು ಶುರುವಾಗಲಿವೆ. ಸದ್ಯ 10 ಕಿ.ಮೀ ದೂರದ ಶಾಲೆಗೆ ಹೋಗಬೇಕಿದೆ. ಅನ್ನಪೂರ್ಣೇಶ್ವರಿನಗರಕ್ಕೆ ಸ್ಥಳಾಂತರವಾದರೆ, ಅಲ್ಲಿಂದ 25 ಕಿ.ಮೀ ಶಾಲೆಗೆ ಹೋಗಬೇಕು. ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ. ಅನಿವಾರ್ಯವಾಗಿ ಮನೆ ಖಾಲಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದೂ ಅಳಲು ತೋಡಿಕೊಂಡರು.

ಎಂಜಿನಿಯರ್‌ಗಳ ಭೇಟಿ: ಬೆಂಗಳೂರು ಸಿವಿಲ್ ಎಂಜಿನಿಯರ್ಸ್ ಕನ್ಸ್‌ಲ್ಟಂಟ್ ಒಕ್ಕೂಟದ ಚೇರ್ಮನ್ ಶ್ರೀಕಾಂತ್ ಚನ್ನಾಳ ಹಾಗೂ ಸದಸ್ಯರು, ವಸತಿ ಸಮುಚ್ಚಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

‘ಬಿರುಕು ಕಾಣಿಸಿಕೊಂಡು ಕಟ್ಟಡ ವಾಲಿರುವುದಕ್ಕೆ ಪಾಯದಲ್ಲಿರುವ ಸಮಸ್ಯೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಅಧ್ಯಯನ ಅಗತ್ಯವಿದೆ. ಐಐಎಸ್ಸಿ ತಜ್ಞರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದೂ ಹೇಳಿದರು.

ಸಿವಿಲ್ ಎಂಜಿನಿಯರ್ ಗಿರೀಶ್, ‘ಪಾಯವನ್ನು ವೈಜ್ಞಾನಿಕವಾಗಿ ಸರಿಪಡಿಸುವ ಹಾಗೂ ಕಟ್ಟಡದ ಒಂದು ಭಾಗವನ್ನು ಜಾಕ್‌ ಮೂಲಕ ಮೇಲಕ್ಕೆತ್ತಬಹುದು. ಇದನ್ನು ಹೊರತುಪಡಿಸಿಯೂ ಸಮಸ್ಯೆ ಇತ್ಯರ್ಥಕ್ಕೆ ಹಲವು ಅವಕಾಶಗಳಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.