ಬೆಂಗಳೂರು: ಅಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ‘ಹೊರಾಂಗಣ ಜಾಹೀರಾತು ಸಂಘ’ದ ಸದಸ್ಯರು ಪುರಭವನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
‘ಅಧಿಕೃತವಾಗಿ 1,800 ಜಾಹೀರಾತು ಫಲಕಗಳಿವೆ. ಆದರೆ 4,500 ಅನಧಿಕೃತ ಫಲಕಗಳನ್ನು ಬಿಬಿಎಂಪಿ ತೆರವು ಮಾಡಿರುವುದಾಗಿ ಹೇಳಿದೆ. ಅನಧಿಕೃತವಾಗಿ ಅಳವಡಿಸುವವರೆಗೂ ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಿದ್ದರು’ ಎಂದು ಸಂಘದ ಅಧ್ಯಕ್ಷ ಎಸ್.ಎಂ.ಜಾವೇದ್ ಪ್ರಶ್ನಿಸಿದರು.
‘ಈ ಉದ್ಯಮದಿಂದ ವರ್ಷಕ್ಕೆ ₹ 600 ಕೋಟಿ ವಹಿವಾಟು ನಡೆಯುತ್ತದೆ. ಇದರಿಂದ ₹ 100 ಕೋಟಿಗೂ ಹೆಚ್ಚು ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಉತ್ತರ ಭಾರತದ ಬಸ್‌ಶೇಲ್ಟರ್ ಮತ್ತು ಸ್ಕೈವಾಕ್ ಕಂಪನಿಗಳಿಗೆ ಆಹ್ವಾನ ನೀಡುತ್ತಿವೆ. ಇದೆಲ್ಲದಕ್ಕೂ ಬಿಬಿಎಂಪಿ ಅಧಿಕಾರಿಗಳ ಕುಮ್ಮಕ್ಕಿದೆ’ ಎಂದು ಆರೋಪಿಸಿದರು.
ಉಪಾಧ್ಯಕ್ಷ ಆರ್.ಕೆ.ಬಾಟಿಯಾ,‘ಈ ಉದ್ಯಮವನ್ನೇ ನೆಚ್ಚಿಕೊಂಡಿರುವ 6 ಲಕ್ಷ ಮಂದಿ ಬೀದಿಪಾಲಾಗುತ್ತಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ಇದ್ದಾರೆ. ಅಧಿಕೃತವಾದ ಜಾಹೀರಾತು ಫಲಕ ತೆರವುಗೊಳಿಸಿದರೆ, ಸಾಲ ಮರುಪಾವತಿಸುವುದು ಹೇಗೆ?. ಕೂಡಲೇ ಅನುಮತಿ ಕೊಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.