ADVERTISEMENT

ಈ ವರ್ಷ 3 ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗಿದೆ: ನ್ಯಾ. ಕಾಮೇಶ್ವರ ರಾವ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 22:35 IST
Last Updated 12 ನವೆಂಬರ್ 2024, 22:35 IST
   

ಬೆಂಗಳೂರು: ‘ಲಭ್ಯವಿರುವ ಉಚಿತ ಕಾನೂನು ನೆರವು ಮತ್ತು ಕಾನೂನು ಸೇವಾ ಸಂಸ್ಥೆಗಳ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ತಿಳಿಸಿದರು.

ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಸೇವೆಗಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಕಲರಿಗೂ ನೆರವು ತಲುಪಿಸುವ ಮೂಲಕ ನ್ಯಾಯದ ಸಬಲೀಕರಣ ಎಂಬ ಘೋಷವಾಕ್ಯದಡಿ ಈ ಬಾರಿಯ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ಮೂರು ರಾಷ್ಟ್ರೀಯ ಲೋಕ ಅದಾಲತ್‌ ನಡೆದಿದ್ದು, ರಾಜ್ಯದಲ್ಲಿ 7,17,035 ಬಾಕಿ ಪ್ರಕರಣಗಳು ಮತ್ತು 97,71,148 ದಾವೆ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ 2024ರ ಜನವರಿ-ಸೆಪ್ಟೆಂಬರ್‌ ಅವಧಿಯಲ್ಲಿ 1,289 ಕಾನೂನು ಸೇವಾ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಿವೆ. 2,096 ಪ್ಯಾನಲ್‌ ವಕೀಲರು, 5,032 ಪ್ಯಾರಾ ಲೀಗಲ್‌ ವಾಲಂಟಿಯರ್ಸ್‌, 6,218 ನ್ಯಾಯಾಲಯ ಆಧಾರಿತ ಕಾನೂನು ಸೇವೆಗಳು, 88,538 ಕ್ಲಿನಿಕ್‌ ಆಧಾರಿತ ಕಾನೂನು ಸೇವೆಗಳನ್ನು ಒದಗಿಸಲಾಗಿದೆ‘ ಎಂದು ವಿವರಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಅನು ಶಿವರಾಮನ್‌, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ್‌ ಕಾಮತ್‌, ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಹಿರಿ–ಕಿರಿಯ ವಕೀಲರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.