ADVERTISEMENT

ಪರಿಷತ್‌ ಚುನಾವಣೆ: ಇಂದು ಮತದಾನ; 78 ಅಭ್ಯರ್ಥಿಗಳು ಕಣದಲ್ಲಿ

ಪದವೀಧರ, ಶಿಕ್ಷಕರ ಆರು ಕ್ಷೇತ್ರಗಳಲ್ಲಿ 78 ಅಭ್ಯರ್ಥಿಗಳು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 1:20 IST
Last Updated 3 ಜೂನ್ 2024, 1:20 IST
   

ಬೆಂಗಳೂರು: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. ಆರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮಂದಿ ಮತದಾರರಿದ್ದಾರೆ.

ಲೋಕಸಭೆ ಚುನಾವಣೆಯ ಮಧ್ಯದಲ್ಲೇ ಬಂದಿರುವ ಈ ಆರು ಕ್ಷೇತ್ರಗಳ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ– ಜೆಡಿಎಸ್‌ ಮೈತ್ರಿಕೂಟ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಬಿಜೆಪಿ ಮಧ್ಯೆ ನೇರ ಪೈಪೋಟಿ ಇದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಜೆಡಿಎಸ್ ಹಣಾಹಣಿ ನಡೆಸುತ್ತಿವೆ.

ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರಗಳ ವ್ಯಾಪ್ತಿಯ 16 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಪದವೀಧರರ ಕ್ಷೇತ್ರಗಳಲ್ಲಿ ಒಟ್ಟು 3.63 ಲಕ್ಷ ಮತದಾರರಿದ್ದಾರೆ. ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ 1.56 ಲಕ್ಷ ಮತದಾರರಿದ್ದಾರೆ. 16 ಜಿಲ್ಲೆಗಳಲ್ಲಿ ಒಟ್ಟು 461 ಮತಗಟ್ಟೆಗಳನ್ನು ಮತದಾನಕ್ಕಾಗಿ ಸಜ್ಜುಗೊಳಿಸಲಾಗಿದೆ.

ADVERTISEMENT

ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿ 15 ಜಿಲ್ಲೆಗಳಿವೆ. ಈ ಕ್ಷೇತ್ರಗಳಲ್ಲಿ ಒಟ್ಟು 70,260 ಮತದಾರರಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತ್ಯಧಿಕ 25,309 ಮತದಾರರಿದ್ದಾರೆ. ಈ ಕ್ಷೇತ್ರಗಳಲ್ಲಿ 170 ಮತಗಟ್ಟೆಗಳನ್ನು ತೆರೆಯಲಾಗಿದೆ. 

ಬಲಗೈ ಬೆರಳಿಗೆ ಶಾಯಿ: ನೈರುತ್ಯ ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಲ್ಲಿ ಮತದಾರರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಲಗೈ ಮಧ್ಯದ ಬೆರಳಿಗೆ ಶಾಯಿಯ ಗುರುತು ಹಾಕಲಾಗುತ್ತದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತದಾರರ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿದಂತೆ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ಭಾವಚಿತ್ರ ಸಹಿತ ಗುರುತಿನ ಹತ್ತು ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.