ದಾಬಸ್ ಪೇಟೆ: ನ.18ರಂದು ತಾನು ಮಹಿಳೆಯನ್ನು ಕೊಂದುಹಾಕಿದ್ದ ಸ್ಥಳದಲ್ಲೇ ಭಾನುವಾರ ಸಂಜೆ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನೆಲಮಂಗಲ ತಾಲ್ಲೂಕು ಶಿವಗಂಗೆ ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕರಿಯಮ್ಮ ಎಂಬ ಮಹಿಳೆಯನ್ನು ಚಿರತೆಯೊಂದು ಕೊಂದುಹಾಕಿತ್ತು. ಈಗ ಆ ಜಾಗದ ಸಮೀಪದಲ್ಲಿರುವ ಬಂಡೆಯ ಮೇಲೆ ಚಿರತೆ ಕಾಣಿಸಿಕೊಂಡಿದೆ. ಸ್ಥಳೀಯರು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಆ ಚಿರತೆಯ ಫೋಟೊವನ್ನು ಸೆರೆಹಿಡಿದಿದ್ದಾರೆ.
ಮಹಿಳೆಯನ್ನು ಕೊಂದ ಘಟನೆಯ ನಂತರ, ಅರಣ್ಯ ಇಲಾಖೆಯವರು ಎಂಟು ಚಿಕ್ಕ ಬೋನು ಹಾಗೂ ಒಂದು ದೊಡ್ಡದಾದ ‘ತುಮಕೂರು ಬೋನ’ನ್ನು ಚಿರತೆ ಓಡಾಡಿದ್ದ ಜಾಗಗಳಲ್ಲಿ ಇಟ್ಟಿದ್ದಾರೆ.
‘ಇದು ಕರಿಯಮ್ಮ ಅವರನ್ನು ಕೊಂದ ಚಿರತೆಯಾಗಿರಬಹುದು. ಏಕೆಂದರೆ, ಕರಿಯಮ್ಮ ಅವರನ್ನು ಕೊಂದು ಮೃತದೇಹವನ್ನು ಎಳೆದುಕೊಂಡು ಹೋದ ಜಾಗದಿಂದ ನೂರು ಮೀಟರ್ ದೂರದಲ್ಲಿ ಈ ಚಿರತೆ ಕಾಣಿಸಿಕೊಂಡಿದೆ’ ಎಂದು ಗ್ರಾಮಸ್ಥರು ಅಂದಾಜಿಸುತ್ತಿದ್ದಾರೆ.
ಈಗಾಗಲೇ 40ರಿಂದ 50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿಯುವುದಕ್ಕಾಗಿ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ’ಈಗ ಚಿರತೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ರಾತ್ರಿ ವೇಳೆ ಹೊರಗೆ ಅಡ್ಡಾಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
‘ಕರಿಯಮ್ಮ ಅವರನ್ನು ಕೊಂದ ಚಿರತೆ ಇದೇ ಇರಬಹುದು. ಗಲಾಟೆ ಮಾಡದೆ ಚಿರತೆ ಬೋನಿಗೆ ಬೀಳುವಂತೆ ಮಾಡಬೇಕಿದೆ’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕರಿಯಮ್ಮ ಅವರು ಹಸುಗಳಿಗೆ ಮೇವು ತರಲು ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿ ಕೊಂದುಹಾಕಿತ್ತು.
ಚಿರತೆ ದಾಳಿಯಿಂದಾಗಿ ಹೊಲಗಳ ಹತ್ತಿರಕ್ಕೆ ಹೋಗಲು, ದನ–ಕರು ಮೇಕೆ ಮೇಯಿಸಲು ತೆರಳಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಚಿರತೆಯ ಭಯದಿಂದಾಗಿ ಮುದ್ದೀರೇಶ್ವರ ಜಾತ್ರೆಯನ್ನು ಮಾಡದಂತೆ ತಹಶೀಲ್ದಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.