ADVERTISEMENT

ಅಪಘಾತ ತಗ್ಗಿಸಲು ಪೊಲೀಸರಿಂದ ಪಾಠ: BMTC ಚಾಲಕರು, ನಿರ್ವಾಹಕರಿಗೆ ವಿಶೇಷ ತರಬೇತಿ

ಕೆ.ಎಸ್.ಸುನಿಲ್
Published 6 ಸೆಪ್ಟೆಂಬರ್ 2024, 23:55 IST
Last Updated 6 ಸೆಪ್ಟೆಂಬರ್ 2024, 23:55 IST
ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್ ಪಿ. ಗ್ರಾಮ ಪುರೋಹಿತ್ ತರಬೇತಿ ನೀಡಿದರು.
ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್ ಪಿ. ಗ್ರಾಮ ಪುರೋಹಿತ್ ತರಬೇತಿ ನೀಡಿದರು.   

ಬೆಂಗಳೂರು: ಬಿಎಂಟಿಸಿ ಬಸ್‌ಗಳಿಂದ ಸಂಭವಿಸುತ್ತಿರುವ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರ ಸಂಚಾರ ಪೊಲೀಸ್‌ ವಿಭಾಗದ ವತಿಯಿಂದ ಚಾಲಕರು ಹಾಗೂ ನಿರ್ವಾಹಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಒಂಬತ್ತು ತಿಂಗಳಿನಿಂದ ನೀಡುತ್ತಿರುವ ತರಬೇತಿಯ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ಸಂಚಾರ ಪೊಲೀಸ್‌ ವಿಭಾಗದ ಅಂಕಿಅಂಶಗಳ ಪ್ರಕಾರ, ಮೂರು ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷ (ಆಗಸ್ಟ್‌ವರೆಗೆ)  ಬಿಎಂಟಿಸಿ ಬಸ್‌ಗಳಿಂದ 19 ಅಪಘಾತಗಳು ಸಂಭವಿಸಿವೆ. ಇದು ಸಾರಿಗೆ ಇಲಾಖೆಗೆ ಸ್ವಲ್ಪ ಸಮಾಧಾನ ಉಂಟುಮಾಡಿದೆ. 12 ಸಾವಿರ ಸಿಬ್ಬಂದಿಗೆ ತರಬೇತಿ ನೀಡುವ ಗುರಿ ಹೊಂದಿದ್ದು, ಈವರೆಗೂ 8 ಸಾವಿರಕ್ಕೂ ಹೆಚ್ಚು ಮಂದಿ ತರಬೇತಿ ನೀಡಲಾಗಿದೆ.

ಬಿಎಂಟಿಸಿ ಬಸ್​ ಚಾಲಕರು ಮತ್ತು ನಿರ್ವಾಹಕರು ನಿತ್ಯ 12 ತಾಸು ಕೆಲಸ ಮಾಡುತ್ತಾರೆ. ಕೆಲವರು ರಾಮನಗರ, ಮಂಡ್ಯ, ತುಮಕೂರು, ಮೈಸೂರಿನಿಂದಲೂ ಬಂದು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಸಂಚಾರ ದಟ್ಟಣೆ ಮಧ್ಯೆ ಕೆಲಸ ಮಾಡಿ ಚಾಲಕರು ದೈಹಿಕ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಜನದಟ್ಟಣೆ ಸ್ಥಳ ಹಾಗೂ ತಿರುವುಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಒಂಬತ್ತು ತಿಂಗಳಿನಿಂದ ನಿತ್ಯ 50 ಮಂದಿಯಂತೆ ತರಬೇತಿ ನೀಡುತ್ತಿದ್ದು, ಸೇವ್‌ ಲೈಫ್‌ ಫೌಂಡೇಶನ್ ಸಂಸ್ಥೆ ಸಹ ಈ ಕಾರ್ಯಕ್ಕೆ ಕೈ ಜೋಡಿಸಿದೆ.

ADVERTISEMENT

ಸುರಕ್ಷಿತವಾಗಿ ಬಸ್‌ ಚಾಲನೆ ಮಾಡುವ ಕುರಿತು ಚಾಲಕ ಮತ್ತು ನಿರ್ವಾಹಕರಿಗೆ ಸಂಚಾರ ವಿಭಾಗದ ಡಿಸಿಪಿ, ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ತರಬೇತಿ ನೀಡುತ್ತಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಅಪಘಾತ ದೃಶ್ಯಾವಳಿಯನ್ನು ಪ್ರದರ್ಶಿಸಿ, ಅಪಾಯಕಾರಿ ಚಾಲನಾ ವಿಧಾನದ ಕುರಿತು ವಿವರಿಸಲಾಗುತ್ತಿದೆ. ಅಪಘಾತದಿಂದಾಗಿ ಸಂತ್ರಸ್ತ ಕುಟುಂಬಗಳು ಯಾವ ರೀತಿ ಸಂಕಷ್ಟಕ್ಕೆ ಸಿಲುಕುತ್ತವೆ ಎಂಬುದನ್ನು ಉದಾಹರಣೆ ಸಹಿತ ಹೇಳಲಾಗುತ್ತದೆ.

‘ಅಪಘಾತ ಸಂಭವಿಸಲು ಕಾರಣವೇನು? ಚಾಲಕನ ನಿರ್ಲಕ್ಷ್ಯವೆ? ಅವೈಜ್ಞಾನಿಕ ರಸ್ತೆ ಅಥವಾ ಗುಂಡಿ ಬಿದ್ದ ರಸ್ತೆ ಕಾರಣವೆ? ಅತಿಯಾದ ವೇಗವೇ? ಎಂಬುದರ ಬಗ್ಗೆ ತರಬೇತಿ ವೇಳೆ ವಿಶ್ಲೇಷಣೆ ಮಾಡಲಾಗುತ್ತದೆ. ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದು ಹೇಗೆ? ನಿದ್ದೆ ಮಂಪರಿನಲ್ಲಿ ಏನು ಮಾಡಬೇಕು? ಬಸ್‌ ನಿಲ್ದಾಣಗಳಲ್ಲಿ ಯಾವ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸಬೇಕು? ಪ್ರಯಾಣಿಕರ ಜತೆ ಹೇಗೆ ವರ್ತಿಸಬೇಕು? ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್‌ ವಿವರಿಸಿದರು.

‘ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಕೆಲವೊಮ್ಮೆ ದ್ವಿಚಕ್ರ ವಾಹನಗಳು ವೇಗವಾಗಿ ಬಂದು ಬಸ್‌ಗೆ ಡಿಕ್ಕಿ ಹೊಡೆದಿರುವ ಉದಾಹರಣೆಗಳೂ ಇವೆ. ಚಾಲಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು’ ಎಂದು ಹೇಳಿದರು.

‘ಸಂಚಾರ ವಿಭಾಗದ ಪೊಲೀಸ್‌ ಸಿಬ್ಬಂದಿಯ ಸಹಕಾರದೊಂದಿಗೆ ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ನೀಡುತ್ತಿರುವ ತರಬೇತಿ ಪ್ರಯೋಜನಕಾರಿಯಾಗಿದೆ. ಅಪಘಾತಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸಮಾಧಾನದ ವಿಚಾರ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದರು.

ಎಂ.ಎನ್. ಅನುಚೇತ್‌

ಬಿಎಂಟಿಸಿ ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ನೀಡುತ್ತಿರುವ ವಿಶೇಷ ತರಬೇತಿ ಫಲ ನೀಡುತ್ತಿದೆ. ಅಪಘಾತಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆ ಆಗಿದೆ

-ಎಂ.ಎನ್.ಅನುಚೇತ್‌, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌

‘ಅಪಘಾತ ತಪ್ಪಿಸಲು ಸಾಧ್ಯ ಎಂಬುದರ ಅರಿವಾಗಿದೆ’

‘ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯಗಳನ್ನು ನೋಡಿದಾಗ ಸ್ವಲ್ಪ ಎಚ್ಚರ ವಹಿಸಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎನಿಸುತ್ತದೆ. ಅತಿ ವೇಗ ಮತ್ತು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುವುದರಿಂದಲೇ ಹೆಚ್ಚಿನ ಅಪಘಾತಗಳಾಗುತ್ತವೆ. ಕೆಲವೊಮ್ಮೆ ನಮ್ಮ ತಪ್ಪು ಇಲ್ಲದಿದ್ದರೂ ಬೇರೆ ವಾಹನಗಳು ವೇಗವಾಗಿ ಬಂದು ಡಿಕ್ಕಿ ಹೊಡೆದಿರುವ ಉದಾಹರಣೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ನಡುವೆ ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದೇ ಸಾಹಸ’ ಎಂದು ತರಬೇತಿ ಪಡೆದ ಚಾಲಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.