ರಾಜರಾಜೇಶ್ವರಿ ನಗರ: ಕನ್ನಡಿಗರು ಸ್ವಾಭಿಮಾನಿಗಳು. ಎಲ್ಲರನ್ನೂ ಸಹೋದರರಂತೆ ಕಾಣುವ ಸಹೃದಯರು. ಅನ್ಯ ಭಾಷಿಕರಿಗೆ ಈ ನೆಲದಲ್ಲಿ ಉದ್ಯೋಗ, ಆಶ್ರಯ, ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ. ಕನ್ನಡ ಕಲಿಯುವ ಮೂಲಕ ಈ ಮಣ್ಣಿನ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ತಿಳಿದುಕೊಳ್ಳಬೇಕು ಎಂದು ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಆಯುಕ್ತ ಬಿ.ಸಿ. ಸತೀಶ್ ತಿಳಿಸಿದರು.
ವಲಯ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಂಟಿ ಆಯುಕ್ತ ಅಜಯ್ ವಿ., ಉಪ ಆಯುಕ್ತ ಅಬ್ದುಲ್ ರಬ್, ಮುಖ್ಯ ಎಂಜಿನಿಯರ್ ಸ್ವಯಂಪ್ರಭ, ಉಪ ನಿಯಂತ್ರಕ (ಹಣಕಾಸು) ಸತ್ಯಮೂರ್ತಿ, ಸಹಾಯಕ ಕಂದಾಯ ಅಧಿಕಾರಿಗಳಾದ ವೆಂಕಟಪ್ಪ ಸುರೇಶ್, ಶಿವಕುಮಾರ್, ಮೋಹನ್, ಕಂದಾಯ ಅಧಿಕಾರಿ ಸತೀಶ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಟಿ.ಎಂ. ಶಶಿಕುಮಾರ್, ಪಾಪರೆಡ್ಡಿ ಉಪಸ್ಥಿತರಿದ್ದರು.
ಕನ್ನಡದ ಬೆಳವಣಿಗೆ ಮೇಲೆ ಆಂಗ್ಲ ಭಾಷೆ ಪ್ರಭಾವ (ಪೀಣ್ಯ ದಾಸರಹಳ್ಳಿ ವರದಿ):
ಜಾಗತಿಕರಣ ಮತ್ತು ಅಧುನಿಕ ತಂತ್ರಜ್ಞಾನದಿಂದ ಆಂಗ್ಲ ಭಾಷೆಯ ಪ್ರಭಾವ ಕನ್ನಡ ಭಾಷಾ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಅದಲ್ಲದೆ ಬೆಂಗಳೂರಿಗೆ ಹರಿದು ಬರುತ್ತಿರುವ ವಲಸಿಗರಿಂದಾಗಿ ಕನ್ನಡ ಭಾಷೆ ನಲುಗಿದೆ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಹೆಗ್ಗನಹಳ್ಳಿಯಲ್ಲಿ ಜಿ.ಕೆ.ಡಬ್ಲ್ಯೂ ಲೇಔಟ್ ಉದ್ಯಾನ ಹಿತ ರಕ್ಷಣಾ ಸಮಿತಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತಾನಾಡಿದರು.
ಪರಭಾಷಿಕರು ಇಲ್ಲೇ ಬದುಕು ಭವಿಷ್ಯ ಕಟ್ಟಿಕೊಂಡರೂ ನಾಡು ನುಡಿಯೆಡೆಗೆ ಅಸಡ್ಡೆ ತೋರುತ್ತಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ದಿನೇಶ್, ಸಮಾಜ ಸೇವಕ ವೈ ಜಿ.ನಾಗರಾಜ್, ಪತ್ರಕರ್ತ ಗೋವಿಂದರಾಜು ಪಟೇಲ್, ಕನ್ನಡ ಪರ ಚಿಂತಕರಾದ ಉಮೇಶ್, ಶಂಕರ್, ವಿಜಯ್, ಹರೀಶ್ ಹಾಗೂ ಉದ್ಯಾನ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ನಾಡ ಧ್ವಜದೊಂದಿಗೆ ಜಾಥಾ (ಕೆಂಗೇರಿ ವರದಿ):
ಯಶವಂತಪುರ ವಿಧಾನಸಭಾ ಕ್ಷೇತ್ರದ ಜಯ ಕರ್ನಾಟಕ ಸಂಘಟನೆ ಸದಸ್ಯರು 250 ಅಡಿ ಉದ್ದದ ಬೃಹತ್ ನಾಡ ಧ್ವಜದೊಂದಿಗೆ ಸುಮಾರು 2 ಕಿಲೋ ಮೀಟರ್ ವರೆಗೆ ಜಾಥಾ ನಡೆಸಿದರು.
ಕೆಂಗೇರಿ ಉಪನಗರದ ಹೊಯ್ಸಳ ವೃತ್ತದಿಂದ ಆರಂಭಗೊಂಡ ಜಾಥಾ ಭುವನೇಶ್ವರಿ ನಗರದ ಜಯ ಕರ್ನಾಟಕ ಕಚೇರಿವರೆಗೂ ಸಾಗಿತು. ಕನ್ನಡ ಬೆಳಗಲಿ, ಹಿಂದಿ ತೊಲಗಲಿ ಎಂಬ ಘೋಷ ವಾಕ್ಯಗಳು ಇದೇ ವೇಳೆ ಕಂಡು ಬಂದವು.
ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಜೆಡಿಎಸ್ ಮುಖಂಡ ಹನುಮಂತೇಗೌಡ, ಜಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ಯೋಗಾನಂದ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಂ.ನಟರಾಜ್, ಎಂ.ಸುಮಂತ್ ಬಿಲ್ಲವ, ಯಶವಂತಪುರ ವಿ., ಕ್ಷೇತ್ರದ ಅಧ್ಯಕ್ಷ ಕೆ.ವಿಜಯ್ ಕುಮಾರ್, ಉಪಾಧ್ಯಕ್ಷ ಜಗದೀಶ್ ಗೌಡ, ಕ್ಷೇತ್ರ ಕಾರ್ಯಾಧ್ಯಕ್ಷ ಎಚ್. ಚಂದ್ರಶೇಖರ್ ಉಪಸ್ಥಿತರಿದ್ದರು.
‘ಇತರ ಭಾಷೆಗಳ ವ್ಯಾಮೋಹ’
ಯಲಹಂಕ: ಇತರೆ ಭಾಷೆಗಳ ವ್ಯಾಮೋಹಗಳಿಗೆ ಒಳಗಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯಲಾಗುತ್ತಿದೆ. ಕನ್ನಡದ ಉಳಿವಿಗಾಗಿ ಹೋರಾಡಿದ ಮಹಾನುಭಾವರನ್ನು ಹೀಗಳೆಯಲಾಗುತ್ತಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು. ಯಲಹಂಕ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಹಾಗೂ ಅಭಿಯಾಂಜಲಿ ನೃತ್ಯಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತಹಶೀಲ್ದಾರ್ ಶ್ರೇಯಸ್ ಜಿ.ಎಸ್. ಉಪತಹಶೀಲ್ದಾರ್ ರಮೇಶ್ ಬಾಬು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಪೂರ್ವ ಕುಲಕರ್ಣಿ ಜೋಸೆಫ್ ಬಿಬಿಎಂಪಿ ಯಲಹಂಕ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಸುಧಾಕರ ರೆಡ್ಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಸಂಜೀವಯ್ಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಪ್ರಕಾಶ್ ಬಿ.ಕೆ. ಸ್ಥಳೀಯ ಮುಖಂಡರಾದ ಗುರು ಪ್ರಕಾಶ್ ಮುನಿರಾಜು ಪ್ರೇಮಲತಾ ಎಂ.ಎಚ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.