ADVERTISEMENT

ನಿಜಲಿಂಗಪ್ಪ ಅವರ ಜೀವನ ಪಠ್ಯವಾಗಲಿ: ಸಚಿವ ವಿ. ಸೋಮಣ್ಣ ಆಶಯ

25ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ ಆಶಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:39 IST
Last Updated 24 ಆಗಸ್ಟ್ 2024, 15:39 IST
ಸಮಾರಂಭದಲ್ಲಿ ವಿ. ಸೋಮಣ್ಣ ಅವರು ಎಸ್. ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಮುಖಂಡ ಅರುಣ್ ಸೋಮಣ್ಣ, ನ್ಯಾ. ಶಿವರಾಜ ವಿ. ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ಹಂ.ಪ. ನಾಗರಾಜಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿ. ಸೋಮಣ್ಣ ಅವರು ಎಸ್. ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಮುಖಂಡ ಅರುಣ್ ಸೋಮಣ್ಣ, ನ್ಯಾ. ಶಿವರಾಜ ವಿ. ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ಹಂ.ಪ. ನಾಗರಾಜಯ್ಯ ಉಪಸ್ಥಿತರಿದ್ದರು.   

ಬೆಂಗಳೂರು: ‘ಕರ್ನಾಟಕ ಏಕೀಕರಣದ ರೂವಾರಿ ಎಸ್. ನಿಜಲಿಂಗಪ್ಪ ಹಾಗೂ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಜೀವನವು ಪ್ರೌಢಶಾಲೆಯ ಪಠ್ಯವಾಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. 

ಎಸ್. ನಿಜಲಿಂಗಪ್ಪ ಬಳಗವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಸ್. ನಿಜಲಿಂಗಪ್ಪ 25ನೇ ಸಂಸ್ಮರಣೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಹಾಗೂ ನಿಜಲಿಂಗಪ್ಪ ಅವರು ದೂರದೃಷ್ಟಿ ಹೊಂದಿದ್ದರು. ಅವರ ದಿನಚರಿ, ಜೀವನ ಹಾಗೂ ಸಾಧನೆ ಮುಂದಿನ ಪೀಳಿಗೆಗೆ ತಲುಪಬೇಕು. ಆದ್ದರಿಂದ ಅವರ ಬಗ್ಗೆ ಪಠ್ಯ ರೂಪಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆಯುತ್ತೇನೆ’ ಎಂದು ಹೇಳಿದರು. 

ADVERTISEMENT

‘ನಿಜಲಿಂಗಪ್ಪ ಅವರು ಬದ್ಧತೆ ಹೊಂದಿದ್ದರು. ಅವರು ರಾಜಕೀಯದಲ್ಲಿ ಎಂದೂ ಓಲೈಕೆ ಮಾಡಿದವರಲ್ಲ. ಕರ್ನಾಟಕದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದರು. ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದ ಅವರು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು. ಬೆಂಗಳೂರು ಸಕ್ಕರೆ ಕಾರ್ಖಾನೆ, ಕಾರವಾರ ಮತ್ತು ಮಂಗಳೂರು ಬಂದರು ನಿರ್ಮಾಣ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಸ್ಥಾಪನೆ ಸೇರಿ ಹಲವು ಯೋಜನೆಗಳು ಅವರ ಕಾಲದಲ್ಲಿ ಕಾರ್ಯಗತವಾಗಿದ್ದವು. ಕರ್ನಾಟಕ ವೈದ್ಯಕೀಯ ಕಾಲೇಜನ್ನು ಸರ್ಕಾರವೂ ನಡೆಸಬಹುದು ಎಂಬುದಕ್ಕೆ ಅವರು ಪ್ರೇರಣೆ. ಅವರ ಜಯಂತಿ ಆಚರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ’ ಎಂದರು. 

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, ‘ಕರ್ನಾಟಕ ಇತಿಹಾಸದ ಪುಟಗಳಲ್ಲಿ ನಿಜಲಿಂಗಪ್ಪ ಅವರು ಮರೆಯಲಾಗದ ವ್ಯಕ್ತಿಯಾಗಿದ್ದಾರೆ. ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಸೇವೆ ಸಾರ್ಥಕವಾಗಲು ನಿಜಲಿಂಗಪ್ಪ ಅವರನ್ನು ಮಾದರಿಯಾಗಿ ಸ್ವೀಕರಿಸಬೇಕು. ನಿಜಲಿಂಗಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಅವರ ಕೊಡುಗೆಗಳು ಹಾಗೂ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದು ಹೇಳಿದರು. 

ಸಾಹಿತಿ ಹಂ.ಪ. ನಾಗರಾಜಯ್ಯ, ‘ನಿಜಲಿಂಗಪ್ಪ ರಾಜಕಾರಣಿಯಾಗಿದ್ದರೂ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.