ಬೆಂಗಳೂರು: ಆಟೊ ಚಾಲಕರ ಸ್ಫೂರ್ತಿಯ ಚಿಲುಮೆ ದಿವಂಗತ ಶಂಕರ್‌ನಾಗ್ ಜನ್ಮದಿನವನ್ನು ಸರ್ಕಾರ ‘ಚಾಲಕರ ದಿನ’ವಾಗಿ ಆಚರಿಸಬೇಕು ಎಂದು ಕರ್ನಾಟಕ ಆಟೊ, ಟ್ಯಾಕ್ಸಿ, ಗೂಡ್ಸ್, ಶಾಲಾ ವಾಹನ ಚಾಲಕರ ಸಂಘಟನೆಗಳ ‘ಚಾಲಕರ ದಿನಾಚರಣೆ ವೇದಿಕೆ’ ಕೋರಿದೆ.
ಶಂಕರ್‌ನಾಗ್ ಜನ್ಮದಿನದ ಅಂಗವಾಗಿ ಪೀಸ್ ಆಟೊ, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ, ನೊಂದ ಚಾಲಕರ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ 11ನೇ ವರ್ಷದ ‘ಚಾಲಕರ ದಿನ’ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬೆಂಗಳೂರಿನಲ್ಲೇ 3 ಲಕ್ಷಕ್ಕೂ ಅಧಿಕ ಆಟೊಗಳಿವೆ. ಆಟೊ ಚಾಲಕರಿಲ್ಲದೇ ಬೆಂಗಳೂರು ಇಲ್ಲ’ ಎಂದು ತಿಳಿಸಿದರು.
ಪೀಸ್ ಆಟೊ ವತಿಯಿಂದ ಪ್ರತಿವರ್ಷ ಶಂಕರ್‌ನಾಗ್ ಜನ್ಮದಿನದ ಪ್ರಯುಕ್ತ ಒಬ್ಬರಿಗೆ ಒಂದು ಆಟೊ ಉಚಿತವಾಗಿ ನೀಡುತ್ತಿದ್ದರು. ಈ ಬಾರಿ ಎರಡು ಆಟೊ ನೀಡಿದ್ದಾರೆ ಎಂದು ಹೇಳಿದರು.
ಮಹಿಳೆಯರಿಗೆ ಆಟೊ ಖರೀದಿಗೆ ಹಣಕಾಸಿನ ನೆರವು ನೀಡಲಾಯಿತು. ಮಾನವೀಯತೆ ಮೆರೆದ ಚಾಲಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಬಡಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ನಟರಾದ ಶ್ರೀಮುರುಳಿ, ಗರುಡ ರಾಮ್, ಪೀಸ್-ಆಟೊ ಅಧ್ಯಕ್ಷ ರಘು ನಾರಾಯಣ ಗೌಡ, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷ ಮಂಜುನಾಥ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷ ಜಿ. ರವಿ ಕುಮಾರ್, ಜೈ ಭಾರತ ವಾಹನ ಚಾಲಕರ ಸಂಘದ ಅಧ್ಯಕ್ಷ ಚಂದ್ರ ಕುಮಾರ್, ನೊಂದ ಚಾಲಕರ ವೇದಿಕೆಯ ರಾಜು, ಜೈ ಕರ್ನಾಟಕ ಅಧ್ಯಕ್ಷ ಆನಂದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.