ಬೆಂಗಳೂರು: ಯಾರದ್ದೋ ಸ್ವಾರ್ಥಕ್ಕೆ ಎರಡು ಸಂಘಟನೆಗಳು ಒಡೆದು ಹಲವು ತುಂಡುಗಳಾಗಿವೆ. ಅದು ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ. ಮತ್ತೆ ಒಂದೇ ಧ್ವನಿ ಆಗದೇ ಇದ್ದರೆ ಸಮಾಜಕ್ಕೆ ಬಲ ಬರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಲಹೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪದವೀಧರರ ಸಂಘವು ಭಾನುವಾರ ಆಯೋಜಿಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರೈತ ಸಂಘ ಒಂದೇ ಆಗಿದ್ದರೆ ರಾಜ್ಯ ಹೇಗಿರುತ್ತಿತ್ತು? ದಲಿತ ಸಂಘಟನೆಗಳು ಒಂದೇ ಆಗಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸಬೇಕಿದೆ. ಭಿನ್ನಾಭಿಪ್ರಾಯ ಏನೇ ಇದ್ದರೂ ಅನ್ಯಾಯದ ವಿರುದ್ಧ ಧ್ವನಿ ಎತ್ತಲು, ಸಮಾಜವನ್ನು ಏಳಿಗೆಯತ್ತ ಒಯ್ಯಲು ಒಂದಾಗಿರಬೇಕು’ ಎಂದರು.
‘ಮಾತಿನ ಪ್ರಚೋದನೆಗೆ ಒಳಗಾಗಿ ಬೇರೆ ಪಕ್ಷದಲ್ಲಿದ್ದ ನಾರಾಯಣಸ್ವಾಮಿ ಮನಸ್ಸು ಮಾಗಿದ ಮೇಲೆ, ಸರಿ ಯಾವುದು, ತಪ್ಪು ಯಾವುದು ಎಂದು ಗೊತ್ತಾದ ಮೇಲೆ ಸತ್ಯ ಮತ್ತು ಪ್ರಾಮಾಣಿಕತೆ ಇರುವ ಪಕ್ಷಕ್ಕೆ ಬಂದಿದ್ದಾರೆ. ಗರ್ಭಗುಡಿಯಲ್ಲಿ ಕುಳಿತಿದ್ದಾರೆ. ಅವರು ಸಮಾಜಕ್ಕೆ ಇನ್ನಷ್ಟು ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಸಲಹೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿ ಹೋರಾಟಗಾರ ನಾರಾಯಣಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
ಸಂಸದ ಗೋವಿಂದ ಎಂ. ಕಾರಜೋಳ ಅಧ್ಯಕ್ಷತೆ ವಹಿಸಿದ್ದರು. ಬಸವ ಮಹಾಮನೆಯ ಅಧ್ಯಕ್ಷ ಸಿದ್ಧರಾಮ ಬೆಲ್ದಾಳ ಶರಣರು, ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಸೇವಾಲಾಲ್ ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ, ಮಾಜಿ ಸಚಿವರು, ಶಾಸಕರು, ಸಂಸದರು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.
‘ನನ್ನ ಸಮುದಾಯದ ಹೆಸರು ಚಲುವಾದಿ ಎಂದಾಗಿತ್ತು’
‘ನನ್ನ ಹೆಸರು ತಿಮ್ಮಯ್ಯ ನಾರಾಯಣಸ್ವಾಮಿ ಆಗಿತ್ತು. ಜನಸೇವೆ ಮಾಡಬೇಕು ಎಂದು ರಾಜಕಾರಣಕ್ಕೆ ಬಂದೆ. ಛಲದಿಂದ ಗುರಿ ಸಾಧಿಸುವುದು ನನ್ನ ಇರಾದೆಯಾಗಿತ್ತು. ನನ್ನ ಹೆಸರನ್ನು ಛಲವಾದಿ ನಾರಾಯಣ ಸ್ವಾಮಿ ಎಂದು ಬದಲಾಯಿಸಿಕೊಂಡೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.
‘ನನ್ನ ಸಮುದಾಯದ ಹೆಸರು ಚಲುವಾದಿ ಎಂದಾಗಿತ್ತು. ನಾನು ಛಲವಾದಿ ಸಂಘಟನೆ ಕಟ್ಟಿ ಹೆಸರು ಬದಲಾಯಿಸಿಕೊಂಡ ಮೇಲೆ ಸಮುದಾಯದ ಹೆಸರು ಛಲವಾದಿಯಾಯಿತು’ ಎಂದರು.
‘ಕಲಿಕೆಯ ಕಾಲದಲ್ಲಿ ಬಿ.ಬಸವಲಿಂಗಪ್ಪರಿಂದ ಪ್ರೇರೇಪಿತನಾಗಿದ್ದೆ. ಆನಂತರ ಬಂಗಾರಪ್ಪನವರು ಕೈಹಿಡಿದು ನಡೆಸಿದರು. ಆ ನಾಯಕರಿಬ್ಬರೂ ಕಾಂಗ್ರೆಸಿಗರಾಗಿದ್ದರಿಂದ ನನ್ನ ಆಯ್ಕೆಯೂ ಕಾಂಗ್ರೆಸ್ ಆಯಿತು. ಕಾಂಗ್ರೆಸಿಗನಾದೆ. ಆನಂತರ 40 ವರ್ಷ ಜೀತದಾಳುಗಿಂತ ಹೆಚ್ಚಾಗಿ ದುಡಿದೆ. 7 ಬಾರಿ ಟಿಕೆಟ್ ತಪ್ಪಿಸಿದರು. ಆ ಸಿಟ್ಟಿನಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆನೇ ಹೊರತು ಬಿಜೆಪಿಯ ಮೇಲಿನ ಪ್ರೀತಿಯಿಂದ ಸೇರಿದ್ದಲ್ಲ. ಆದರೆ ಗರ್ಭಗುಡಿ ಸಂಸ್ಕೃತಿಯ ಪಕ್ಷ ಬ್ರಾಹ್ಮಣರ ಪಕ್ಷ ಎಂದೆಲ್ಲ ತಿಳಿದಿದ್ದ ನನಗೆ ಇಲ್ಲಿ ಅದ್ಯಾವುದು ಕಂಡಿಲ್ಲ. ಈಗ ಬಿಜೆಪಿಯನ್ನು ಪ್ರೀತಿಸುತ್ತಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.