ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ನಾಗರತ್ನಮ್ಮ, ‘ದೇಶದ ಸಂವಿಧಾನದ ಪ್ರಕಾರ ಮಹಿಳೆಯರು ಮತ್ತು ಪುರುಷರು ಸಮಾನರು. ಆದರೆ, ಮಹಿಳೆಯರು ಕೀಳು, ಪುರುಷರು ಮೇಲು ಎಂಬ ಭಾವನೆಯಿಂದ ನೋಡುವ ಪ್ರವೃತ್ತಿ ಇಂದಿಗೂ ಬದಲಾಗಿಲ್ಲ. ಅದಕ್ಕೆ, ಮಣಿಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಈ ಮನಸ್ಥಿತಿ ಬದಲಾಗಬೇಕು’ ಎಂದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ಬಿ. ಹೊನ್ನು ಸಿದ್ದಾರ್ಥ, ‘ಮಣಿಪುರದಲ್ಲಿ ಜುಲೈ 19ರಂದು ಮೈತ್ರಿ ಸಮುದಾಯದವರು ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಮಾಡುವ ಮೂಲಕ ಅಮಾನವೀಯ ಕೃತ್ಯವೆಸಗಿದ್ದಾರೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಶಾಂತಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶೇಖ್ ಲತೀಫ್ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ಅಧ್ಯಕ್ಷ ಲೋಕೇಶ್ ಎನ್. ಮತ್ತು ವಿದ್ಯಾರ್ಥಿ ಕಾರ್ಯದರ್ಶಿ ಲಿಂಗರಾಜು ಎಸ್.ಎಂ ಮತ್ತು ನಂದೀಶ್ ಆರ್. ಎನ್.ಹರ್ಷವರ್ಧನ, ಹಿರಿಯ ವಿದ್ಯಾರ್ಥಿ ಶ್ರೀಧರ್ ಎಸ್, ಶಶಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.