ADVERTISEMENT

ಅನುಭವ, ಅಂತಕರಣದಿಂದ ಭಾಷಾಂತರ ಕೂಡಿರಲಿ: ಕುಲಪತಿ ಪರಮಶಿವಮೂರ್ತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:55 IST
Last Updated 5 ಏಪ್ರಿಲ್ 2024, 15:55 IST
ಬೆಂಗಳೂರು ಜೈನ್‌ ವಿಶ್ವವಿದ್ಯಾಲಯದಲ್ಲಿ ನಡೆದ ಭಾಷಾಂತರ ಕಮ್ಮಟದಲ್ಲಿ ಜೈನ್ ವಿಶ್ವವಿದ್ಯಾಲಯದ ಕುಲಪತಿ ರಾಜ್ ಸಿಂಗ್ ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು.
ಬೆಂಗಳೂರು ಜೈನ್‌ ವಿಶ್ವವಿದ್ಯಾಲಯದಲ್ಲಿ ನಡೆದ ಭಾಷಾಂತರ ಕಮ್ಮಟದಲ್ಲಿ ಜೈನ್ ವಿಶ್ವವಿದ್ಯಾಲಯದ ಕುಲಪತಿ ರಾಜ್ ಸಿಂಗ್ ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು.   

ಬೆಂಗಳೂರು: ವಿದ್ಯಾರ್ಥಿಗಳು ಭಾಷಾಂತರವನ್ನು ಅನುಭವ ಮತ್ತು ಅಂತಕರಣದಿಂದ ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪರಮಶಿವಮೂರ್ತಿ ಸಲಹೆ ನೀಡಿದರು.

ಇಲ್ಲಿನ ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಭಾಷಾ ನಿಕಾಯದ ಕನ್ನಡ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ಭಾಷಾಂತರ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಮ್ಮಟಗಳಲ್ಲಿ ಭಾಗಿಯಾಗಿ ಪಡೆಯುವ ಅನುಭವ, ತರಬೇತಿಯು ಮುಂದೆ ಭಾಷಾಂತರ ಮಾಡುವ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದರು.

ADVERTISEMENT

ಜೈನ್ ವಿಶ್ವವಿದ್ಯಾಲಯದ ಕುಲಪತಿ ರಾಜ್ ಸಿಂಗ್ ಮಾತನಾಡಿ, ‘ಭಾಷಾಂತರದ ನೆಲೆ–ಹಿನ್ನೆಲೆಯ ಅರಿವು ಹೊಂದುವುದು ಮುಖ್ಯ. ನಿಷ್ಠೆ, ಅಭಿವ್ಯಕ್ತಿ, ಸೊಬಗು ಮತ್ತು ಮೂಲ ಭಾಷೆಯ ಪ್ರಭಾವ, ಶೈಲಿ, ಸ್ಪಷ್ಟತೆ ಹಾಗೂ ಭಾಷಾ ವೈಶಿಷ್ಟ್ಯ ಇವುಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಅನುವಾದ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಅನುವಾದಕ್ಕೊಂದು ಅರ್ಥ ಬರುತ್ತದೆ’ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಅರವಿಂದ ಮಾಲಗತ್ತಿ ಮಾತನಾಡಿ, ‘ಮೂಲ ಕೃತಿಗೆ ಶೇ 100ರಷ್ಟು ನ್ಯಾಯಸಲ್ಲಿಸುವುದು ಸಾಧ್ಯವಿಲ್ಲ ಎಂಬ ಮಾತಿದೆ. ಇದನ್ನು ಅನುವಾದದ ಎಲ್ಲ ಪ್ರಕಾರಗಳಿಗೆ ಅನ್ವಯಿಸಲಾಗದು. ಅನುಸೃಷ್ಟಿ, ಮರು ಸೃಷ್ಟಿ, ರೂಪಾಂತರ ಸೃಷ್ಟಿ ಕ್ರಿಯೆಗಳಲ್ಲಿ ರೂಪಾಂತರದ ಅನುವಾದವು ಮೂಲ ಕೃತಿಯ ಸಾಮರ್ಥ್ಯವನ್ನು ಮೀರುವ ಸಾಧ್ಯತೆಗಳಿವೆ’ ಎಂದು ವಿವರಿಸಿದರು.

ಪ್ರಾಧ್ಯಾಪಕಿ ರಜನಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಭಾಷಾಂತರ ಕಮ್ಮಟದ ನಿರ್ದೇಶಕ ಎ.ಮೋಹನ ಕುಂಟಾರ್, ಸಂಚಾಲಕಿ ರಾಜೇಶ್ವರಿ ವೈ.ಎಂ, ಪ್ರಾಧ್ಯಾಪಕ ರಾಜಕುಮಾರ್ ಬಡಿಗೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.