ADVERTISEMENT

ಕೋವಿಡ್‌ ಬಿಲ್‌ ಪಾವತಿ ಕುರಿತು ತನಿಖೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:50 IST
Last Updated 8 ಸೆಪ್ಟೆಂಬರ್ 2024, 15:50 IST
<div class="paragraphs"><p>ಆರ್. ಮಂಜುನಾಥ್</p></div>

ಆರ್. ಮಂಜುನಾಥ್

   

ಬೆಂಗಳೂರು: ಬಿಬಿಎಂಪಿಯ ದಾಸರಹಳ್ಳಿ ವಲಯದಲ್ಲಿ ‘ಕೋವಿಡ್‌–19’ ನಿರ್ವಹಣಾ ವೆಚ್ಚಗಳ ಪಾವತಿಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್. ಮಂಜುನಾಥ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘2020ರಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಬಿಬಿಎಂಪಿ ದಾಸರಹಳ್ಳಿ ವಲಯದ ವ್ಯಾಪ್ತಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) 10,100 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿತ್ತು. ಈ ಕೇಂದ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಕೋವಿಡ್ ನಿರ್ವಹಣೆಯ ಬಹುಪಾಲು ಬಿಲ್‌ಗಳನ್ನು ಬಿಬಿಎಂಪಿಯ ಕಲ್ಯಾಣ ಇಲಾಖೆಯಿಂದ ಅನುಮೋದನೆ ಮಾಡಿಸಿ, ಹಣ ಪಾವತಿಸಲಾಗಿದೆ’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಇದೊಂದು ದೊಡ್ಡ ಮೊತ್ತದ ಬಿಲ್ ಆಗಿದ್ದು, ಇದರಲ್ಲಿ ಲೋಪದೋಷಗಳು ಕಂಡು ಬಂದಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ನಾನು ಶಾಸಕನಾಗಿದ್ದ ಅವಧಿಯಲ್ಲೇ ಬಿಬಿಎಂಪಿಯ ವಿಶೇಷ ಆಯುಕ್ತರು ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೆ. ಆದರೂ ತನಿಖೆ ನಡೆಸಿಲ್ಲ. ಮಹಾಲೇಖಪಾಲರು ಅಥವಾ ರಾಜ್ಯದ ಅಕೌಂಟೆಂಟ್‌ ಜನರಲ್‌ ಅವರಿಂದಲೂ ಲೆಕ್ಕಪರಿಶೋಧನೆ ನಡೆಸಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಈ ವಲಯ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಹಾಗೂ ಬಿಐಇಸಿ ಕೋವಿಡ್ ಆರೈಕೆ ಕೇಂದ್ರದ ನಿರ್ವಹಣಾ ವೆಚ್ಚವನ್ನು ದಾಸರಹಳ್ಳಿಯ ಬಿಬಿಎಂಪಿ ವಲಯದಿಂದಲೇ ಪಾವತಿಸಿರುವುದಾಗಿ ಮಾಹಿತಿ ಇದೆ. ಹಾಗಾಗಿ ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.