ಬೆಂಗಳೂರು: ರಾಜ್ಯದ ಹಲವು ಸಾಹಿತಿ ಹಾಗೂ ಹೋರಾಟಗಾರರಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿದ್ದು, ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.
‘ಬಸವೇಶ್ವರನಗರ ನಿವಾಸಿ ವೈದ್ಯೆ ಹಾಗೂ ಲೇಖಕಿ ವಸುಂಧರಾ ಭೂಪತಿ ಅವರು ಪತ್ರದ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮೇ 29ರಂದು ವಸುಂಧರಾ ಅವರ ಮನೆ ವಿಳಾಸಕ್ಕೆ ಪತ್ರ ಬಂದಿದೆ. ಪತ್ರದ ಮೇಲೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಅಂಚೆ ಕಚೇರಿ ಮುದ್ರೆ ಇದೆ. ಅಲ್ಲಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದರು.
ಕವಿ ಬಂಜಗೆರೆ ಜಯಪ್ರಕಾಶ್ ಅವರಿಗೂ ಬೆದರಿಕೆ ಪತ್ರ ಬಂದಿದ್ದು, ದೂರು ಸಲ್ಲಿಸಿದ್ದಾರೆ. ಈ ಕುರಿತು ಪ್ರಕ್ರಿಯಿಸಿದ ಬಂಜಗೆರೆ, ‘ಆರು ತಿಂಗಳ ಹಿಂದೆ ಇದೇ ರೀತಿ ಪತ್ರ ಬರೆದಿದ್ದ ವ್ಯಕ್ತಿಯೇ ಈಗಲೂ ಬರೆದಿದ್ದಾನೆ. ಈ ಕುರಿತು ಹಾರೋಹಳ್ಳಿ ಪೊಲೀಸರ ಗಮನಕ್ಕೆ ತಂದಿರುವೆ’ ಎಂದರು.
ದೂರಿನ ವಿವರ: ‘ನಾನು ವೃತ್ತಿಯಲ್ಲಿ ವೈದ್ಯೆ. ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ. ಮಹಿಳಾಪರ ಹಾಗೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ವಸುಂಧರಾ ದೂರಿನಲ್ಲಿ ತಿಳಿಸಿದ್ದಾರೆ.
‘ಎಸ್.ಜಿ. ಸಿದ್ದರಾಮಯ್ಯ, ಕುಂ. ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಬಿ.ಟಿ. ಲಲಿತಾ ನಾಯಕ್, ಪ್ರಕಾಶ್ ರಾಜ್ (ನಟ), ಭಗವಾನ್, ಮಹೇಶ್ ಚಂದ್ರ ಗುರು, ದ್ವಾರಕಾನಾಥ್, ಮೈಸೂರಿನ ಭಾಸ್ಕರ್ ಪ್ರಸಾದ್, ಚನ್ನಮಲ್ಲಸ್ವಾಮಿ, ನಿಜಗುಣಾನಂದ, ದಿನೇಶ್ ಅಮಿನ್‌ಮಟ್ಟು, ಹಂಪ ನಾಗರಾಜಯ್ಯ ಸೇರಿ 61 ಜನರ ಜೊತೆ ಗುರುತಿಸಿಕೊಳ್ಳದಂತೆ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ’ ಎಂದಿದ್ದಾರೆ.
‘ಎಲ್ಲ ಸಾಹಿತಿ ಹಾಗೂ ಹೋರಾಟಗಾರರ ‘ಜೀವದ ದೀಪ ಆರುತ್ತದೆ’ ಎಂದು ಬರೆದಿದ್ದಾರೆ. ಪತ್ರದ ಕೊನೆಯಲ್ಲಿ ‘ಸಹಿಷ್ಣು ಹಿಂದು, ಜೈ ಹಿಂದು ರಾಷ್ಟ್ರ’ ಎಂಬ ಬರಹವಿದೆ. ಈ ಹಿಂದೆಯೂ ಹಲವು ಬಾರಿ ಇಂಥ ಪತ್ರಗಳು ಬಂದಿದ್ದವು. ಈಗ ಪುನಃ ಪತ್ರ ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.