ಬೆಂಗಳೂರು: ‘ಹಲವು ಗಂಟೆಗಳು ಒಂದೆಡೆ ಕುಳಿತು ಕೆಲಸ ಮಾಡುವುದು, ಓದುವುದು ಸೇರಿ ಬದಲಾದ ಜೀವನಶೈಲಿಯಿಂದಾಗಿ ಬೆನ್ನುಮೂಳೆ ಸಮಸ್ಯೆ ಮಕ್ಕಳು, ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ನಾರಾಯಣ ಹೆಲ್ತ್ ವೈದ್ಯರು ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ. ಅರುಣ್ ರಂಗನಾಥನ್, ‘ಮಕ್ಕಳು, ವಯಸ್ಕರೂ ಬೆನ್ನುಮೂಳೆ ಸಮಸ್ಯೆ ಸಂಬಂಧ ಆಸ್ಪತ್ರೆಗೆ ಬರುತ್ತಿದ್ದಾರೆ. ಬೆನ್ನುಮೂಳೆ, ಬೆನ್ನುಹುರಿ ಸವೆತದಿಂದ ತೀವ್ರ ನೋವು ನಿರಂತರ ಬಾಧಿಸುವ ಸಾಧ್ಯತೆ ಇರುತ್ತದೆ. ಇದನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ದೈನಂದಿನ ಚಟುವಟಿಕೆಗೆ ಅಡ್ಡಿಯಾಗಲಿದೆ. ಆದ್ದರಿಂದ ತಪಾಸಣೆಗೆ ಒಳಗಾಗಿ, ಚಿಕಿತ್ಸೆ ಪಡೆದುಕೊಳ್ಳಬೇಕು. ನಿರಂತರ ಒಂದೆಡೆ ಕುಳಿತು ಕೆಲಸ ಮಾಡುವುದು, ಹೆಚ್ಚು ಹೊತ್ತು ವಾಹನ ಚಲಾಯಿಸುವುದು, ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನುನೋವಿನ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.
‘ಈ ಬೆನ್ನು ನೋವಿನಿಂದ ಅಂಗವಿಕಲರಾಗುವ ಸಾಧ್ಯತೆ ಇರುತ್ತದೆ. ಬೆನ್ನುಮೂಳೆ ಘಾಸಿ, ವಿರೂಪಗೊಂಡ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಸಹಕಾರಿಯಾಗಲಿದೆ. ಸಾಂಪ್ರದಾಯಿಕ ವಿಧಾನದಲ್ಲಿ ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಗದಿದ್ದರಿಂದ ರೋಬೊಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಶಸ್ತ್ರಚಿಕಿತ್ಸೆ ಸುಲಭವಾಗುವ ಜತೆಗೆ ವ್ಯಕ್ತಿಯೂ ಬೇಗ ಚೇತರಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ. ಕೋಮಲ್ ಪ್ರಸಾದ್, ‘ಕಲಬುರಗಿಯ 13 ವರ್ಷದ ಬಾಲಕಿಗೆ ಬೆನ್ನುಮೂಳೆ ವಿರೂಪಗೊಂಡು, ದೈನಂದಿನ ಚಟುವಟಿಕೆ ಕಷ್ಟವಾಗಿತ್ತು. ಅವಳು ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಳು. ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ವಿರೂಪಗೊಂಡ ಬೆನ್ನುಮೂಳೆ ಸರಿಪಡಿಸಿ, ಸ್ಕ್ರೂ ಅಳವಡಿಸಲಾಯಿತು. ಇದೇ ರೀತಿ, ಇಲ್ಲಿನ 18 ವರ್ಷದ ಯುವಕನೊಬ್ಬ ಬೆನ್ನುಮೂಳೆ ಊನತೆಯಿಂದ ಸಮಸ್ಯೆ ಎದುರಿಸುತ್ತಿದ್ದ. ಈ ಸಮಸ್ಯೆ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿತ್ತು. ಆತನಿಗೂ ರೊಬೊಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.