ADVERTISEMENT

ಮದ್ಯದ ದರ ಇಳಿಕೆಗೆ ತಾತ್ಕಾಲಿಕ ತಡೆ

ಉತ್ಪಾದನಾ ವೆಚ್ಚದ ಮಾಹಿತಿ ಹಂಚಿಕೊಳ್ಳಲು ಕಂಪನಿಗಳ ತಕರಾರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:44 IST
Last Updated 30 ಜೂನ್ 2024, 15:44 IST
<div class="paragraphs"><p>ಮದ್ಯ (ಪ್ರಾತಿನಿಧಿಕ ಚಿತ್ರ)</p></div>

ಮದ್ಯ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಉತ್ಪಾದನಾ ವೆಚ್ಚದ ಮಾಹಿತಿ ಹಂಚಿಕೊಳ್ಳಲು ಮದ್ಯ ಉತ್ಪಾದಕರು ತಕರಾರು ಎತ್ತಿರುವ ಕಾರಣದಿಂದ ಮದ್ಯದ ದರಗಳ ಇಳಿಕೆ ಪ್ರಕ್ರಿಯೆಯನ್ನು ಅಬಕಾರಿ ಇಲಾಖೆಯು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಸೋಮವಾರದಿಂದ ದರ ಇಳಿಕೆ ಜಾರಿಗೆ ಬರಬೇಕಿತ್ತು.

ಹೆಚ್ಚುವರಿ ಅಬಕಾರಿ ಸುಂಕ (ಎಇಡಿ) ಇಳಿಕೆ ಮತ್ತು ಇತರ ರಾಜ್ಯಗಳಿಗೆ ಸಮನಾಗಿ ಮದ್ಯದ ಘೋಷಿತ ದರ ನಿಗದಿಪಡಿಸುವ ಮೂಲಕ ದರ ಇಳಿಕೆಗೆ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಎರಡು ಕರಡು ಅಧಿಸೂಚನೆಗಳನ್ನು ಹೊರಡಿಸಿತ್ತು. 

ADVERTISEMENT

ವಿವಿಧ ರಾಜ್ಯಗಳಿಗೆ ಕಡಿಮೆ ಮೊತ್ತದ ಘೋಷಿತ ದರ ನಿಗದಿಪಡಿಸುವ ಮದ್ಯ ಉತ್ಪಾದನಾ ಕಂಪನಿಗಳು, ಕರ್ನಾಟಕದಲ್ಲಿ ಹೆಚ್ಚಿನ ಮೊತ್ತದ ಘೋಷಿತ ದರ ನಿಗದಿಪಡಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಲೆಕ್ಕಪರಿಶೋಧಕರು ಮತ್ತು ವೆಚ್ಚ ಪರಿಶೋಧಕರ ಪ್ರಮಾಣಪತ್ರಗಳೊಂದಿಗೆ ಪ್ರತಿ ಬ್ರಾಂಡ್‌ ಮದ್ಯದ ಉತ್ಪಾದನಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಇಲಾಖೆ ಮುಂದಾಗಿತ್ತು.

‘ಹೆಚ್ಚುವರಿ ಅಬಕಾರಿ ತೆರಿಗೆ ಇಳಿಸುವುದು ಸರ್ಕಾರದ ನಿರ್ಧಾರ. ಆದರೆ, ಉತ್ಪಾದನಾ ವೆಚ್ಚದ ಮಾಹಿತಿ ಹಂಚಿಕೊಳ್ಳಲಾಗದು ಎಂದು ಹಲವು ಉತ್ಪಾದಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಕಾನೂನು ತೊಡಕುಂಟಾಗುವ ಸಾಧ್ಯತೆ ಇದೆ. ಆ ಬಗ್ಗೆ ಮತ್ತಷ್ಟು ಪರಿಶೀಲಿಸಲು ದರ ಇಳಿಕೆಯ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’ ಎಂದು ಹಣಕಾಸು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನೆರೆಯ ರಾಜ್ಯಗಳಲ್ಲಿನ ಮದ್ಯದ ದರಗಳಿಗೆ ಸಮಾನವಾಗಿ ರಾಜ್ಯದಲ್ಲೂ ಮದ್ಯದ ದರ ಇಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈಗ ಎದುರಾಗಿರುವ ತೊಡಕುಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಘೋಷಿತ ದರ ನಿಗದಿಗೆ ಸಂಬಂಧಿಸಿದಂತೆ ಎಲ್ಲ ಮದ್ಯ ಉತ್ಪಾದನಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗುವುದು. ಆ ಬಳಿಕ ಮದ್ಯದ ದರ ಇಳಿಕೆಯ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.