ADVERTISEMENT

ಮದ್ಯ ಮಾರಾಟ ಬಂದ್ ಕರೆ ವಾಪಸ್ ಇಲ್ಲ: ಗೋವಿಂದರಾಜ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 15:57 IST
Last Updated 8 ನವೆಂಬರ್ 2024, 15:57 IST
<div class="paragraphs"><p>ಮದ್ಯ (ಪ್ರಾತಿನಿಧಿಕ ಚಿತ್ರ)</p></div>

ಮದ್ಯ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ‘ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನವೆಂಬರ್‌ 20ರಂದು ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ಬೆಂಬಲ ಇಲ್ಲವೆಂದು ಹೇಳಿಕೆ ನೀಡಿರುವ ಕರ್ನಾಟಕ ವೈನ್ ಮರ್ಚಂಟ್ಸ್‌ನ ಹೊನ್ನಗಿರಿ ಗೌಡ ಮತ್ತು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚಂಟ್ಸ್‌ ಸೊಸೈಟಿ ಅಧ್ಯಕ್ಷ ಎಸ್.ಚಂದ್ರಶೇಖರ್‌ ಅವರು ನಮ್ಮ ಒಕ್ಕೂಟದ ಸದಸ್ಯರಲ್ಲ’ ಎಂದು ಫೆಡರೇಶನ್ ಆಫ್ ವೈನ್‌ ಮರ್ಚಂಟ್ಸ್‌ ಅಸೋಸಿಯೇಶನ್ ಕರ್ನಾಟಕ ಸ್ಪಷ್ಟಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ‘ಬೇಡಿಕೆ ಮತ್ತು ಸಮಸ್ಯೆಗಳ ಸಂಬಂಧ ಮೂರು ಸಾವಿರಕ್ಕೂ ಹೆಚ್ಚು ಸನ್ನದುದಾರರ ಸಭೆಯಲ್ಲಿ ಮದ್ಯ ಮಾರಾಟ ಬಂದ್ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಹೊನ್ನಗಿರಿ ಗೌಡ ಮತ್ತು ಎಸ್.ಚಂದ್ರಶೇಖರ್‌ ಅವರು ನಮ್ಮ ಹೋರಾಟ ಹಾಗೂ ‌ತೀರ್ಮಾನಗಳಲ್ಲಿ ಭಾಗವಹಿಸಿದವರಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದಿದ್ದ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ವಿಸ್ತ್ರತ ಚರ್ಚೆ ನಡೆದಿದೆ. ಸಭೆಯಲ್ಲಿ ಅಬಕಾರಿ ಆಯುಕ್ತರು, ಕಾರ್ಯದರ್ಶಿಗಳು ಭಾಗವಹಿಸಿದ್ದರು. ಆದರೆ, ಬಂದ್ ಕರೆ ವಾಪಸ್ ಪಡೆದಿಲ್ಲ’ ಎಂದು ಹೇಳಿದ್ದಾರೆ. 

ಅಬಕಾರಿ ಸಚಿವರ ಪರವಾಗಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಇಬ್ಬರು ಸನ್ನದುದಾರರು ಶುಕ್ರವಾರ ಮೈಸೂರಿನಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಜೊತೆಗೆ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಫೋಟೊವನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.