ಬೆಂಗಳೂರು: ‘ಹಾಸ್ಯ ಸಾಹಿತ್ಯವನ್ನು ಲಘುವಾಗಿ ಪರಿಗಣಿಸಿ, ಗಂಭೀರವಾಗಿ ಅಲಕ್ಷಿಸಲಾಗುತ್ತಿದೆ. ನಗಿಸುವ ಸಾಹಿತ್ಯಕ್ಕೆ ಬೆಲೆ ಇಲ್ಲದಿರುವುದನ್ನು ಕಂಡು ನೋವಾಗುತ್ತದೆ’ ಎಂದು ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.
ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಗಣೇಶ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕಿ, ದಿವಂಗತ ಟಿ.ಸುನಂದಮ್ಮ ಸ್ಮರಣೆ ಮತ್ತು ಸಾಹಿತ್ಯ ಸಂಪುಟ–1ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಗಿನ ವಿಮರ್ಶಕರು ಎಲ್ಲವನ್ನೂ ಅಸಹಿಷ್ಣುತೆಯಿಂದಲೇ ನೋಡುತ್ತಾರೆ. ಮೊದಲು ಹೀಗೆ ಇರಲಿಲ್ಲ. ಬರೆದವರನ್ನು ಬೆನ್ನು ತಟ್ಟುವಂತೆ ವಿಮರ್ಶೆ ಮಾಡುತ್ತಿದ್ದರು. ಕಾಲೆಳೆಯೋದು ಅನ್ನುವ ಪದವೇ ಬಳಕೆಯಲ್ಲಿ ಇರಲಿಲ್ಲ’ ಎಂದರು.
‘ಸುನಂದಮ್ಮ ಅವರದ್ದು ಕೌಟುಂಬಿಕ ಹಾಸ್ಯ ಎನ್ನುವಂತೆ ಅಪಹಾಸ್ಯ ಮಾಡಲಾಗಿತ್ತು. ಅವರು ಬರೆಯುತ್ತಿದ್ದ ಕಾಲದಲ್ಲಿ, ನಾವು ಆಧುನಿಕತೆಗೆ ಆಗಷ್ಟೇ ತೆರೆದುಕೊಳ್ಳುತ್ತಿದ್ದೆವು. ಅದನ್ನೆಲ್ಲಾ ಗಮನಿಸಿ ಅವರು ಹಾಸ್ಯ ಪ್ರಸಂಗಗಳನ್ನು ಕಟ್ಟಿದ್ದಾರೆ’ ಎಂದು ನೆನಪು ಮಾಡಿಕೊಂಡರು.
ಸಾಹಿತಿ ಅ.ರಾ.ಮಿತ್ರ, ‘ಸುನಂದಮ್ಮ ಅವರು ಬಿಡುವಿಲ್ಲದೆ ಬರಹದ ಕೃಷಿ ಮಾಡುತ್ತಿದ್ದರು. ಹಾಸ್ಯ ಪ್ರಕಾರಕ್ಕೆ ಸಿಗದ ಮನ್ನಣೆ ಕುರಿತು ಕೆಲವೊಮ್ಮೆ ಬೇಸರದಿಂದ ಮಾತನಾಡಿದ್ದಾರೆ. ಆದರೆ ಅವರ ಅಂತರಂಗದ ಬರಹ ನಮ್ಮನ್ನೆಲ್ಲಾ ಸುಲಭವಾಗಿ ತಟ್ಟಿತ್ತು’ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ‘ಸುನಂದಮ್ಮ ಅವರ ಹಾಸ್ಯ ನಮ್ಮ ಸಂಭ್ರಮವನ್ನು ಹೆಚ್ಚಿಸುತ್ತದೆ. ಸಮ್ಮೇಳನಗಳಲ್ಲೂ ಹಾಸ್ಯ ಸಾಹಿತ್ಯದ ಗೋಷ್ಠಿಗಳು ಇರಬೇಕು ಎಂದು ಅವರು ಬಯಸಿದ್ದರು’ ಎಂದರು.
ಪತ್ರಕರ್ತೆ ಆರ್.ಪೂರ್ಣಿಮಾ, ‘ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ನಗುವುದೇ ಕಷ್ಟ ಇತ್ತು. ನಗಿಸೋದು ಇನ್ನೂ ಕಷ್ಟ. ಅಂತಹದ್ದರಲ್ಲಿ ಸುನಂದಮ್ಮ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು. ಕಿರಿಯರಿಗೂ ಪ್ರೋತ್ಸಾಹ ನೀಡಿದರು’ ಎಂದು ಸ್ಮರಿಸಿದರು.
*
ಈ ವರ್ಷ ಪುಸ್ತಕ ದೀಪಾವಳಿಯನ್ನು ಆಚರಿಸೋಣ. ಮನೆಗೆ ಬಂದವರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡೋಣ.
-ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ
**
ಪುಸ್ತಕ ಮಾಹಿತಿ
ಪುಸ್ತಕ: ಟಿ.ಸುನಂದಮ್ಮ ಸಾಹಿತ್ಯ ಸಂಪುಟ–1
ಸಂಪಾದಕರು: ವಸುಂಧರಾ ಭೂಪತಿ
ಪ್ರಕಾಶನ: ಅನುಗ್ರಹ
ಬೆಲೆ: ₹250
ಪುಟಗಳು: 256
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.