ADVERTISEMENT

ನಿವೇಶನ ಖರೀದಿಸುವ ಸೋಗಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹2.32 ಕೋಟಿ ಸಾಲ

ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಸಿಸಿಬಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 22:03 IST
Last Updated 8 ಜುಲೈ 2024, 22:03 IST
<div class="paragraphs"><p>ಹಣ  (ಪ್ರಾತಿನಿಧಿಕ ಚಿತ್ರ)</p></div>

ಹಣ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ನಿವೇಶನ ಖರೀದಿಸುವ ಸೋಗಿನಲ್ಲಿ ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದಿದ್ದ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ (ಬೌರಿಂಗ್ ಆಸ್ಪತ್ರೆ ಎದುರು) ಸಹಾಯಕ ಪ್ರಧಾನ ವ್ಯವಸ್ಥಾಪಕ ದೊರೈರಾಜು ಅವರು ನೀಡಿರುವ ದೂರು ಆಧರಿಸಿ ಅನ್ವಯ ಶಿವಣ್ಣ, ಪಿ.ಅಚ್ಚುಕುಟ್ಟನ್, ಮೊಹಮ್ಮದ್ ಫಯಾಜ್, ವೀರಭದ್ರಪ್ಪ ಹಾಗೂ ಸೈಯದ್ ಹಾಶೀಂ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ನಿವೇಶನ ಖರೀದಿಗಾಗಿ ₹2.32 ಕೋಟಿ ಸಾಲ ಪಡೆದಿದ್ದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲತ್ತಹಳ್ಳಿ ಗ್ರಾಮದಲ್ಲಿ ಶಿವಣ್ಣ ಅವರಿಗೆ ಸೇರಿದ ನಿವೇಶನ ಖರೀದಿಸಲು ಸಾಲಕ್ಕಾಗಿ ಬ್ಯಾಂಕ್‌ಗೆ ಅಚ್ಚುಕುಟ್ಟನ್ ಅವರು ಅರ್ಜಿ ಸಲ್ಲಿಸಿದ್ದರು. 2023ರ ಜನವರಿಯಲ್ಲಿ ₹1.16 ಕೋಟಿ ಸಾಲ ಮಂಜೂರು ಆಗಿತ್ತು. ಸಾಲ ಮರುಪಾವತಿ ಮಾಡದಿದ್ದಾಗ ಬ್ಯಾಂಕ್‌ನಿಂದ ಅಚ್ಚುಕುಟ್ಟನ್‌ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ ಸ್ವೀಕೃತಿಯಾಗದೇ ವಾಪಸ್‌ ಬಂದಿತ್ತು. ಅದಾದ ಮೇಲೆ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಿವೇಶನ ಬೇರೆಯವರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇದೇ ರೀತಿ ಆರೋಪಿ ಮೊಹಮ್ಮದ್ ಫಯಾಜ್‌ ಎಂಬುವವರೂ ಶಿವಣ್ಣ ಅವರಿಗೆ ಸೇರಿದ ನಿವೇಶನ ಖರೀದಿಸಲು ಸಾಲಕ್ಕಾಗಿ ಅರ್ಜಿ ಸಲ್ಲಿಸಿ ₹ 1.16 ಕೋಟಿ ಸಾಲ ಪಡೆದುಕೊಂಡಿದ್ದರು. ಅವರಿಗೂ ನೋಟಿಸ್ ನೀಡಿದ್ದು ಸ್ವೀಕೃತವಾಗದೇ ವಾಪಸ್‌ ಬಂದಿತ್ತು. ಅವರೂ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದಿದ್ಧಾರೆ’ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.