ರಾಜರಾಜೇಶ್ವರಿ ನಗರ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಮತ್ತು ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ ಆಸ್ತಿ ತೆರಿಗೆ ವಸೂಲಿ ಮಾಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿ ‘ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ’ ಶುಕ್ರವಾರ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿಯೇ ತೆರಿಗೆ ಬಾಕಿ ಹೆಚ್ಚಿದೆ. ಆಸ್ತಿ ತೆರಿಗೆ ವಸೂಲಿ ಮಾಡಬೇಕು ಎಂದು ತಿಳಿಸಿದರು.
ಲಗ್ಗೆರೆಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿದರು.
ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ 950 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ‘ವೇಗವಾಗಿ ಕಾಮಗಾರಿ ನಡೆಸಬೇಕು. ಪ್ರತಿವಾರ ಕಾಮಗಾರಿಯ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸುಮನಹಳ್ಳಿ ಬಳಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಕೇಂದ್ರದ ಪುನರ್ ನವೀಕರಣ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು. ‘ತಿಂಗಳ ಒಳಗೆ ಕಾಮಗಾರಿ ಮುಗಿಸಿ ನಾಯಿಗಳಿಗೆ ಚಿಕಿತ್ಸೆ ನೀಡುವುದನ್ನು ಆರಂಭಿಸಬೇಕು’ ಎಂದು ಹೇಳಿದರು.
ಲೋಕಾಯುಕ್ತರ ನಿರ್ದೇಶನದಂತೆ ನಾಗರಬಾವಿ ಕೆರೆಯ ಸರ್ವೇ ಮಾಡಿ, ಕೆರೆ ಸುತ್ತಲೂ ಬೇಲಿ ನಿರ್ಮಿಸುವ ಕಾಮಗಾರಿಯನ್ನು ವೀಕ್ಷಿಸಿದರು. ‘ಪಕ್ಕದಲ್ಲಿ ಖಾಲಿ ಇರುವ ಉದ್ಯಾನ ಜಾಗವನ್ನು ಕೂಡ ಸರ್ವೆ ಮಾಡಿ ಬೇಲಿ ಹಾಕಿ’ ಎಂದು ಸೂಚನೆ ನೀಡಿದರು.
ಕೊಟ್ಟಿಗೆ ಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೈಸೂರು ರಸ್ತೆ ವೃಷಭಾವತಿ ಕಾಲುವೆ ಪಕ್ಕದಲ್ಲಿರುವ ಟ್ರಾನ್ಸ್‌ಫರ್ ಸ್ಟೇಷನ್ ಪರಿಶೀಲಿಸಿದರು.
ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತ ಬಿ.ಸಿ ಸತೀಶ್ ಕುಮಾರ್, ವಲಯ ಜಂಟಿ ಆಯುಕ್ತ ಅಜಯ್, ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಮುಖ್ಯ ಎಂಜಿನಿಯರ್ ಸ್ವಯಂಪ್ರಭ, ಲೋಕೇಶ್ ಭಾಗವಹಿಸಿದ್ದರು.
ಬಡವರು ವಾಸಿಸುವ ಪ್ರದೇಶ ದಲಿತರ ಕಾಲೊನಿ ಮತ್ತು ಸ್ಮಶಾನಗಳಲ್ಲಿ ಸ್ವಚ್ಛತೆ ನೈರ್ಮಲ್ಯ ಕಾಪಾಡುವಲ್ಲಿ ಆರೋಗ್ಯ ಅಧಿಕಾರಿ ವಿಫಲರಾಗಿರುವುದನ್ನು ಕಂಡು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೇರೋಹಳ್ಳಿ ದಲಿತ ಕಾಲೊನಿ (ದಂಡಿನ ಮಾರಮ್ಮ) ಲಗ್ಗೆರೆ ಮತ್ತು ಕೆಲವು ದಲಿತರ ಕಾಲೊನಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂದು ದಲಿತ ಮುಖಂಡರು ಅಹವಾಲು ಸಲ್ಲಿಸಿದರು. ‘ದಲಿತರ ಕಾಲೊನಿಗಳ ಅಭಿವೃದ್ಧಿಗೆ ₹13 ಕೋಟಿ ಮೀಸಲಾಗಿದೆ. ಒಂದು ವಾರದೊಳಗೆ ಕಾಮಗಾರಿ ಪ್ರಾರಂಭ ಮಾಡಬೇಕು. ಒಂದು ತಿಂಗಳಲ್ಲಿ ಮತ್ತೆ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಬರುತ್ತೇನೆ. ಮುಂದಿನ ಸಭೆಗೆ ಜಲ ಮಂಡಳಿ ಬೆಸ್ಕಾಂ ಇಲಾಖೆ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಹಾಜರಿರಬೇಕು’ ಎಂದು ಮುಖ್ಯ ಆಯುಕ್ತ ಸೂಚಿಸಿದರು. ಮಲ್ಲತಳ್ಳಿಯಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ಹೋಗಿ ಒಂದು ವರ್ಷವಾಗಿದೆ ರಿಪೇರಿ ಆಗಿಲ್ಲ ಸರ್ಕಾರಿ ಶಾಲೆಯಲ್ಲಿ 700 ವಿದ್ಯಾರ್ಥಿಗಳಿದ್ದರೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ ಅನಧಿಕೃತ ಕಟೌಟ್‌ಗಳು ಹಾವಳಿ ಜಾಸ್ತಿಯಾಗಿವೆ ಎಂದು ನಾಗರಿಕರು ದೂರಿದರು. ಹೊಸಕೆರೆಹಳ್ಳಿ ಕೆರೆ ರಸ್ತೆ ಹಾಳಾಗಿ ಹಲವು ವರ್ಷಗಳು ಕಳೆದಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಜವರೇಗೌಡನ ದೊಡ್ಡಿಯಲ್ಲಿ ಚರಂಡಿಗಳು ಕಿತ್ತು ಹೋಗಿವೆ. ಕಂದಾಯ ಬಡಾವಣೆ ವಸತಿ ಪ್ರದೇಶಗಳಲ್ಲಿ ಎ ಖಾತೆಗಳು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಬಿಡಿಎ. ಬಿಎಂಆರ್‌ಡಿಎ ಅನುಮತಿ ಪಡೆದ ವಸತಿ ಪ್ರದೇಶಗಳಿಗೆ ಮಾತ್ರ ಎ ಖಾತೆಗಳನ್ನುನೀಡಲಾಗುವುದು. ಬಿಡಿಎ ಅನುಮತಿ ಪಡೆದ ಬಡಾವಣೆಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ( ಕಂದಾಯ) ಮುನೀಶ್ ಮೌದ್ಗಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.