ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಬಳಿಯ ಇಲಿಯಾಸ್ ನಗರದಲ್ಲಿ ‘ಲೂಡೊ’ ಮೊಬೈಲ್ ಗೇಮ್ ಆಡುವ ವಿಚಾರದಲ್ಲಿ ಶುರುವಾದ ಜಗಳ ಶೇಖ್ ಮಿಲನ್ (32) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.
‘ಬೇಂದ್ರೆ ನಗರ ನಿವಾಸಿ ಆಗಿದ್ದ ಶೇಕ್,ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಅವರ ಕೊಲೆ ಸಂಬಂಧ ಸ್ನೇಹಿತರಾದ ಶೋಯಿಲ್, ಅಲಿ, ಅಸು ಹಾಗೂ ನಯಾಝ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೇಳಿದರು.
‘ಪಶ್ಚಿಮ ಬಂಗಾಳದ ಶೇಖ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಸಮೇತ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶೇಕ್ ಹಾಗೂ ಅವರ ಸ್ನೇಹಿತರು ಸಮಯ ಸಿಕ್ಕಾಗಲೆಲ್ಲ ಹಣ ಕಟ್ಟಿ ಲೂಡೊ ಗೇಮ್ ಆಡುತ್ತಿದ್ದರು. ಶುಕ್ರವಾರ ತಡರಾತ್ರಿಯೂ ತಲಾ ₹ 200 ಕಟ್ಟಿ ಇಲಿಯಾಸ್ ನಗರದಲ್ಲಿ ಸಾಮೂಹಿಕವಾಗಿ ಮೊಬೈಲ್‌ನಲ್ಲಿ ’ಲೂಡೊ’ ಗೇಮ್ ಆಡುತ್ತಿದ್ದರು.
‘ಗೇಮ್ ಕೊನೆಯ ಹಂತದಲ್ಲಿರುವಾಗಲೇಶೇಖ್ ಮಿಲನ್ ಒತ್ತಬೇಕಿದ್ದ ಬಟನ್‌ನನ್ನು ಸ್ನೇಹಿತ ಶೋಯಿಲ್ ಒತ್ತಿದ್ದ. ಅದನ್ನು ಶೇಖ್ ಪ್ರಶ್ನಿಸಿದ್ದರು. ಕೋಪಗೊಂಡ ಶೋಯಿಲ್ ಹಾಗೂ ಇತರರು, ಅವರ ಜೊತೆ ಜಗಳ ತೆಗೆದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಶೇಖ್ ಅವರ ಕಿವಿ ಬಳಿ ಚಾಕುವಿನಿಂದ ಇರಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸ್ಥಳದಲ್ಲೇ ಕುಸಿದು ಬಿದ್ದು ನರಳಾಡುತ್ತಿದ್ದ ಶೇಖ್ ಅವರನ್ನು ಸ್ಥಳೀಯರೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ವಿವರಿಸಿದರು.
ಚಾಕು ಸಮೇತ ಬಂದಿದ್ದ: ‘ಶೇಖ್ ಸೇರಿದಂತೆ ಐದು ಮಂದಿ ಸ್ನೇಹಿತರು ಸ್ಥಳದಲ್ಲಿ ಇದ್ದರು. ಚಾಕು ಇಟ್ಟುಕೊಂಡೇ ಶೋಯಿಲ್ ಗೇಮ್ ಆಡಲು ಬಂದಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.