ADVERTISEMENT

'ಇಂಡಿಯಾ' ಸರ್ಕಾರ ಬಂದರೆ ಹಣ ವದಂತಿ; IPPB ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 29 ಮೇ 2024, 16:07 IST
Last Updated 29 ಮೇ 2024, 16:07 IST
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆಯಲು ಬಂದಿದ್ದ ಮಹಿಳೆಯರು. ಪ್ರಜಾವಾಣಿ ಚಿತ್ರ
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆಯಲು ಬಂದಿದ್ದ ಮಹಿಳೆಯರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಅಂಚೆ ಕಚೇರಿಯಲ್ಲಿರುವ ಮಹಿಳೆಯರ ಖಾತೆಗೆ ₹ 8,500 ಜಮಾ ಆಗಲಿದೆ’ ಎಂಬ ವದಂತಿ ಹರಡಿದ್ದರಿಂದಾಗಿ, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ‘ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ’ ತೆರೆಯಲು ಸಾವಿರಾರು ಮಹಿಳೆಯರು ಬುಧವಾರ ಜಮಾಯಿಸಿದ್ದರು.

‘ಐಪಿಪಿಬಿ ಖಾತೆ ತೆರೆದರೆ ಈ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಹಬ್ಬಿರುವುದರಿಂದ ಗುಂಪು ಗುಂಪಾಗಿ ಗ್ರಾಹಕರು ಐಪಿಪಿಬಿ ಖಾತೆ ತೆರೆಯಲು ಜಿಪಿಒ ಪ್ರಧಾನ ಕಚೇರಿಗೆ ಬರುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಅಂಚೆ ಇಲಾಖೆಯಿಂದ ಈ ಖಾತೆಗೆ ಯಾವುದೇ ರೀತಿಯ ಹಣ ಜಮೆ ಆಗುವುದಿಲ್ಲ’ ಎಂಬ ಫಲಕಗಳನ್ನು ಜಿಪಿಒ ಕಚೇರಿಯ ಆವರಣದಲ್ಲಿ ಹಾಕಲಾಗಿದೆ. ಜಿಪಿಒ ಮುಂಭಾಗದಲ್ಲಿ ಸಾವಿರಾರು ಮಹಿಳೆಯರು ಬಂದ ಕಾರಣ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

‘ಮೇ 31ರವರೆಗೆ ಮಾತ್ರ ಐಪಿಪಿಬಿ ಖಾತೆ ತೆರೆಯಲು ಅವಕಾಶ ಇದೆಯಂತೆ. ಆದಷ್ಟು ಬೇಗ ಖಾತೆ ತೆರೆಯಲು ಪ್ರಧಾನ ಅಂಚೆ ಕಚೇರಿಗೆ ಬಂದಿರುವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಖಾತೆಗೆ ₹8,500 ಜಮೆ ಆಗಲಿದೆಯಂತೆ’ ಎಂದು ಚಲ್ಲಘಟ್ಟದ ಫಾತೀಮಾ ಲಿಯಾಖತ್‌ ಅಲಿ ತಿಳಿಸಿದರು.

ADVERTISEMENT

‘ಪ್ರತಿದಿನ ಮುಂಜಾನೆಯೇ ಕಚೇರಿ ಮುಂಭಾಗದಲ್ಲಿ ಬಂದು ಸರತಿಯಲ್ಲಿ ನಿಂತು, ಟೋಕನ್‌ಗಳನ್ನು ಪಡೆದು ಐಪಿಪಿಬಿ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಈ ಸುಳ್ಳು ಸುದ್ದಿಯನ್ನು ನಂಬಿದ ಮಹಿಳೆಯರು ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಇದು ಸುಳ್ಳು ಸುದ್ದಿ ನಂಬಬೇಡಿ ಎಂದು ತಿಳಿಸಿ, ಕಚೇರಿಯ ಆವರಣದಲ್ಲಿ ಜಾಗೃತಿ ಫಲಕವನ್ನೂ ಹಾಕಿದ್ದೇವೆ. ಆದರೂ ಮಹಿಳೆಯರು ನಮ್ಮ ಮಾತು ಕೇಳುತ್ತಿಲ್ಲ’ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆಯಲು ಬಂದಿದ್ದ ಮಹಿಳೆಯರು.

‘ಎರಡು ವರ್ಷಗಳ ಹಿಂದೆಯೇ ಐಪಿಪಿಬಿ ಯೋಜನೆ ಪರಿಚಯಿಸಿದ್ದೇವೆ. ಇದು ಉಳಿತಾಯ ಖಾತೆಯಾಗಿದ್ದು, ₹200 ಪಾವತಿಸಿ ಯಾರು ಬೇಕಾದರೂ ಖಾತೆ ತೆರೆಯಬಹುದು. ಆದರೆ, ವದಂತಿಯಿಂದಾಗಿ ನಿತ್ಯ ನೂರಾರು ಮಹಿಳೆಯರು ಅಂಚೆ ಕಚೇರಿಗೆ ಬರುತ್ತಿದ್ದಾರೆ. ಪ್ರತಿ ದಿನ ಕನಿಷ್ಠ 1 ಸಾವಿರ ಟೋಕನ್‌ ವಿತರಣೆ ಮಾಡಿ ಖಾತೆ ತೆರೆಯಲಾಗುತ್ತಿದೆ. ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಮೇ 6ರಿಂದ ಮೇ 29ರವರೆಗೆ ಬೆಂಗಳೂರಿನ ಜಿಪಿಒದಲ್ಲಿ 8,604 ಖಾತೆಗಳನ್ನು ತೆರೆಯಲಾಗಿದೆ. ಇದಕ್ಕಾಗಿ ವಿಶೇಷವಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ನಗರದ ಯಾವುದೇ ಅಂಚೆ ಕಚೇರಿಗೆ ಹೋದರು ಐಪಿಪಿಬಿ ಖಾತೆಯನ್ನು ತೆರೆಯುವ ಅವಕಾಶವಿದೆ. ಆದ್ದರಿಂದ, ಮಹಿಳೆಯರು ತಮ್ಮ ಅಕ್ಕ–ಪಕ್ಕದ ಅಂಚೆ ಕಚೇರಿಗಳಲ್ಲೇ ಈ ಖಾತೆಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.