ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮತದಾನ ಮಾಡುವ ಸಂದರ್ಭದಲ್ಲೂ ವಿಭಿನ್ನತೆ ತೋರಿದರು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ತಂದೆ–ತಾಯಿ, ಚಿಕ್ಕಪ್ಪ ಶಾಸಕ ರವಿಸುಬ್ರಮಣ್ಯ ಹಾಗೂ ಕುಟುಂಬಸ್ಥರೊಂದಿಗೆ ಒಟ್ಟಾಗಿ ಬಂದು ಗಿರಿನಗರದಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರು ತಂದೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ತಾಯಿ ಅವರಿಗೆ ಮತಗಟ್ಟೆ ಸಮೀಪವೇ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು ಮತ ಚಲಾಯಿಸಿದರು.
ಗಾಂಧಿಬಜಾರ್‌ನ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಚೇತನಾ, ಭುವಿ, ಕೃಷಿ, ಜಿಗ್ನೇಶ್, ಜಿಗ್ನಾ, ರಿದ್ಧಿ, ವರ್ಷಾ ಹಾಗೂ ಲಕ್ಷ್ಮಿ ಅವರು ಒಟ್ಟಾಗಿ ಬಂದು ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಿದರು. ಬಸವನಗುಡಿಯ ಉತ್ತರಾದಿಮಠದ ಸಂಸ್ಕೃತ ವಿದ್ಯಾರ್ಥಿಗಳು ಕೂಡ ಮತ ಚಲಾಯಿಸಿ ಶಾಯಿ ಹಚ್ಚಿದ ಬೆರಳು ತೋರಿಸಿ ಚಿತ್ರ ತೆಗೆದುಕೊಂಡು ಸಂಭ್ರಮಿಸಿದರು.
ನೆರಳು ಹುಡುಕಿ ಹೊರಟ ಕಾರ್ಯಕರ್ತರು: ಮತಗಟ್ಟೆಗಳ 100 ಮೀಟರ್ ದೂರದಲ್ಲಿ ಮತದಾರರಿಗೆ ಮತಪಟ್ಟಿಯಲ್ಲಿ ಅವರ ಹೆಸರು ಹುಡುಕಿ, ಅವರ ಕ್ರಮ ಸಂಖ್ಯೆ, ಕೊಠಡಿ ಸಂಖ್ಯೆ ಬರೆದುಕೊಡುವ ಪಕ್ಷಗಳ ಕಾರ್ಯಕರ್ತರು ಬಿಸಿಲ ಝಳಕ್ಕೆ ಪರಿತಪಿಸಿದರು. ಬೆಳಿಗ್ಗೆ 6ರಿಂದಲೇ ಪಕ್ಷಗಳ ಕಾರ್ಯಕರ್ತರು ಟೇಬಲ್, ಕುರ್ಚಿ ಹಾಕಿಕೊಂಡು ಕುಳಿತು, ಪಟ್ಟಿ ಹಿಡಿದು ಚೀಟಿ ಬರೆಯುತ್ತಿದ್ದರು. ಸಮಯ ಕಳೆದಂತೆಯೇ ಬಿಸಿಲು ಹೆಚ್ಚಾಗಿ ನೆರಳನ್ನು ಹುಡುಕುತ್ತಾ ಹೊರಟರು.
ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕಾರ್ಯಕರ್ತರು ಕಟ್ಟಡಗಳ ನೆರಳು, ಯಾವುದಾದರೂ ಅಂಗಡಿಯ ಆವರಣ ಸೇರಿದಂತೆ ಇತರೆ ಪ್ರದೇಶಗಳನ್ನು ಹುಡುಕಿ ಕುರ್ಚಿ–ಟೇಬಲ್‌ಗಳನ್ನು ಎತ್ತಿಕೊಂಡು ಸಾಗಿದರು. ಹಲವು ಕಡೆ, ಕಟ್ಟಡಗಳ ಒಳಭಾಗ ಹಾಗೂ ರಸ್ತೆಯಿಂದ ಸಾಕಷ್ಟು ದೂರ ಕುಳಿತಿದ್ದರಿಂದ, ಇವರು ಮತದಾರರಿಗೆ ಕಾಣದಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.