ADVERTISEMENT

ಲೋಕಸಭಾ ಚುನಾವಣೆ | ಕಾಂಗ್ರೆಸ್‌ಗೆ ಬೆಂಬಲಿಸಿ: ಐಕ್ಯ ಹೋರಾಟ ಚಾಲನಾ ಸಮಿತಿ ಕರೆ

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 15:23 IST
Last Updated 8 ಏಪ್ರಿಲ್ 2024, 15:23 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳನ್ನು ಸೋಲಿಸಿ, ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆ ನೀಡಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಇಂದೂಧರ ಹೊನ್ನಾಪುರ, ‘ಅವಕಾಶವಾದಿ ರಾಜಕಾರಣಿಗಳು, ಲೂಟಿಕೋರ ಉದ್ಯಮಿಗಳು ಮತ್ತು ಸನಾತನ ಪುರೋಹಿತ ಶಾಹಿಗಳ ದುಷ್ಟಕೂಟ ಸೇರಿಕೊಂಡು ದೇಶದ ಸಾರ್ವಭೌಮತೆ, ಘನತೆ, ನೆಮ್ಮದಿಯನ್ನು ಬೀದಿ ಪಾಲು ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರ ಹಿಡಿದವರು, ಇಂದು ಸಂವಿಧಾನವನ್ನೇ ನಾಶ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಆದ್ದರಿಂದ, ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಈ ಲೋಕಸಭಾ ಚುನಾವಣೆಯಲ್ಲಿ ಅವಕಾಶವಿದೆ. ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಪಂಚ ಗ್ಯಾರಂಟಿ ಮೂಲಕ ರಾಜ್ಯದ ಜನರಿಗೆ ಅನುಕೂಲ ಮಾಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಬೇಕು. ದೇಶದಲ್ಲಿ ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ನಮ್ಮ ಸಮಿತಿಯಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಕಾಂಗ್ರೆಸ್‌ ಪರ ಪ್ರಚಾರ ಹಮ್ಮಿಕೊಳ್ಳಲಾಗುವುದು’ ಎಂದರು. 

‘ಆರ್‌ಎಸ್‌ಎಸ್‌ ಸ್ಥಾಪನೆಗೊಂಡು 2025ಕ್ಕೆ 100 ವರ್ಷಗಳಾಗುತ್ತವೆ. ಆ ಸಂದರ್ಭದಲ್ಲಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿ, ಮನುಧರ್ಮ ಮರುಸ್ಥಾಪನೆ ಮಾಡುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗುರಿಯಾಗಿದೆ ಎಂದು ಹೇಳಿದರು.

ಸಮಿತಿ ಸಂಚಾಲಕ ಮಾವಳ್ಳಿ ಶಂಕರ್‌, ‘ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಡಳಿತದಲ್ಲಿ ಸುಳ್ಳುಗಳೇ ರಾರಾಜಿಸುತ್ತಿವೆ. ಅಭಿವೃದ್ಧಿ ಎಂಬುದೇ ಆಗಿಲ್ಲ. ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದಿದೆ. ಈ ಬಗ್ಗೆ ತನಿಖೆಯಾಗಬೇಕು‘ ಎಂದು ಆಗ್ರಹಿಸಿದರು.

ಸಂಚಾಲಕರಾದ ಎನ್. ವೆಂಕಟೇಶ್, ಗುರುಪ್ರಸಾದ್ ಕೆರೆಗೂಡ, ಜೀವನ ಹಳ್ಳಿ ವೆಂಕಟೇಶ್, ವಿ.ನಾಗರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.