ADVERTISEMENT

ಲೋಕಸಭಾ ಚುನಾವಣೆ: ಮತ ಎಣಿಕೆ ಕೇಂದ್ರಗಳಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 0:06 IST
Last Updated 3 ಜೂನ್ 2024, 0:06 IST
ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೇಂದ್ರಗಳನ್ನು ಸಿಬ್ಬಂದಿ ಸಿದ್ಧಗೊಳಿಸಿದರು
ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೇಂದ್ರಗಳನ್ನು ಸಿಬ್ಬಂದಿ ಸಿದ್ಧಗೊಳಿಸಿದರು   

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಜೂನ್‌ 4ರಂದು ನಡೆಯಲಿದ್ದು, ನಗರದ ಮೂರು ಕೇಂದ್ರಗಳಲ್ಲಿ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಮಲ್ಯ ರಸ್ತೆ ಸೇಂಟ್‌ ಜೋಸೆಫ್ ಕಾಲೇಜು, ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜು, ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದೆ. ಪ್ರತಿ ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಲು ಅವಕಾಶವಿದ್ದು, ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್‌ಗಳನ್ನು ಹಾಕಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಸುದ್ದಿಗಾರರಿಗೆ ಭಾನುವಾರ ಮಾಹಿತಿ ನೀಡಿದರು.

ADVERTISEMENT

ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ಗಳನ್ನು ಬೆಳಿಗ್ಗೆ 6 ಗಂಟೆಗೆ ಬರಲು ತಿಳಿಸಲಾಗಿದೆ. ಗುರುತಿನ ಚೀಟಿ ಇರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶವಿರಲಿದೆ ಎಂದರು. 

ಅಂಚೆ ಮತದಾನವು ಈ ಬಾರಿ ಹೆಚ್ಚಾಗಿದೆ. ಇದರ ಎಣಿಕೆ ಕಾರ್ಯ ನಿರಂತರವಾಗಿ ನಡೆಯಲಿದ್ದು, ಕೊನೆಯ ಸುತ್ತಿಗೆ ಮುಂಚಿತವಾಗಿ ಅಂಚೆ ಮತದಾನದ ಎಣಿಕೆಯನ್ನು ಪೂರ್ಣಗೊಳಿಸಲಾಗುವುದು. ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ ಜೊತೆಗೆ ಚುನಾವಣಾಧಿಕಾರಿ ನಿರ್ದೇಶನದ ಮೇರೆಗೆ ಇನ್ನಿತರ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಹಾಗೂ ವಿಡಿಯೊಗ್ರಫಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ವೀಕ್ಷಕರಿಗಾಗಿ ಒಂದು ಕೊಠಡಿ, ಚುನಾವಣಾಧಿಕಾರಿಗಾಗಿ ಒಂದು ಕೊಠಡಿ ಇರಲಿದೆ. ಮಾಧ್ಯಮ ಕೇಂದ್ರ ಕೂಡ ಇರಲಿದ್ದು, ಇಲ್ಲಿ ಮಾತ್ರ ಮಾಧ್ಯಮದವರು ಮೊಬೈಲ್‌ ಬಳಸಬಹುದು. ಹೊರಗಡೆ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಮತ ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಿಬ್ಬಂದಿ ಎಣಿಕೆ ಕೇಂದ್ರದಲ್ಲಿ ಮೊಬೈಲ್/ಬ್ಯಾಗ್ ತರುವ ಹಾಗಿಲ್ಲ. ಏಜೆಂಟ್‌ಗಳು ಕೂಡ ತರುವಂತಿಲ್ಲ ಎಂದು ತಿಳಿಸಿದರು.

ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್‌ನಲ್ಲಿ ಕೂರಲಿದ್ದೇವೆ ಎಂಬುದು ತಿಳಿದಿರುವುದಿಲ್ಲ. ಜೂನ್ 4ರ ಬೆಳಿಗ್ಗೆ //ಬಂದ ಬಳಿಕ ತಿಳಿಯಲಿದೆ. ಬೆಳಿಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ತುಷಾರ್ ಗಿರಿನಾಥ್‌ ಅವರು ಮತ ಎಣಿಕೆ ಕೇಂದ್ರಗಳನ್ನು ಪರಿಶೀಲಿಸಿದರು. ಚುನಾವಣಾಧಿಕಾರಿಗಳಾದ ಕೆ. ಹರೀಶ್ ಕುಮಾರ್, ದಯಾನಂದ್, ವಿನೋತ್ ಪ್ರಿಯಾ ಉಪಸ್ಥಿತರಿದ್ದರು.

ಎಣಿಕೆ ಕೇಂದ್ರಗಳ ವಿವರ

* ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಮತ ಎಣಿಕೆ ಕೇಂದ್ರ: ಮೌಂಟ್ ಕಾರ್ಮೆಲ್ ಕಾಲೇಜು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8 ಮತಗಟ್ಟೆಗಳ ಸಂಖ್ಯೆ: 2125 ಮತ ಎಣಿಕೆ ಕೊಠಡಿಗಳ ಸಂಖ್ಯೆ: 10 ಟೇಬಲ್‌ಗಳು: 135 ಸಿಬ್ಬಂದಿ : 416

* ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಮತ ಎಣಿಕೆ ಕೇಂದ್ರ: ಸೇಂಟ್ ಜೋಸೆಫ್ ಕಾಲೇಜು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8 ಮತಗಟ್ಟೆಗಳ ಸಂಖ್ಯೆ: 2911 ಮತ ಎಣಿಕೆ ಕೊಠಡಿಗಳ ಸಂಖ್ಯೆ: 19 ಟೇಬಲ್‌ಗಳು : 130 ಸಿಬ್ಬಂದಿ : 390

* ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮತ ಎಣಿಕೆ ಕೇಂದ್ರ: ಎಸ್.ಎಸ್.ಎಂ.ಆರ್.ವಿ ಕಾಲೇಜು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8 ಮತಗಟ್ಟೆಗಳ ಸಂಖ್ಯೆ: 2120 ಮತ ಎಣಿಕೆ ಕೊಠಡಿಗಳ ಸಂಖ್ಯೆ: 9 ಟೇಬಲ್‌ಗಳು : 118 ಸಿಬ್ಬಂದಿ : 354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.