ADVERTISEMENT

ವೃಷಭಾವತಿ ವ್ಯಾಲಿ: ಕಲುಷಿತ ನೀರು ಬಿಡದಂತೆ ಲೋಕಾಯುಕ್ತರ ಆದೇಶ

ದೊರೆಸ್ವಾಮಿ ದೂರು ವಿಚಾರಣೆ ನಡೆಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:57 IST
Last Updated 4 ಮಾರ್ಚ್ 2019, 19:57 IST
   

ಬೆಂಗಳೂರು: ‘ವೃಷಭಾವತಿ ವ್ಯಾಲಿಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ’ ಎಂಬ ಬಗ್ಗೆ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಬೆಂಗಳೂರು ಜಲ ಮಂಡಳಿ, ಮಹಾನಗರಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿದ್ದಾರೆ.

ಈ ಸಂಬಂಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತರು ಕಣಿವೆ ಪ್ರದೇಶದಲ್ಲಿ ಇರುವ ಕಾರ್ಖಾನೆಗಳು ಸಂಸ್ಕರಿಸಿದ ನೀರನ್ನು ಮಾತ್ರ ಕಣಿವೆಗೆ ಹರಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಷರತ್ತುಗಳನ್ನು ಪಾಲಿಸದ ಕೈಗಾರಿಕೆಗಳನ್ನು ಬಂದ್‌ ಮಾಡಿಸಲು ಕ್ರಮ ಕೈಗೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊಳಚೆ ನೀರು ಸಂಸ್ಕರಣೆಗೆ ಕ್ರಮ ಕೈಗೊಳ್ಳದ ಕೆಲವು ಉದ್ಯಮಗಳನ್ನು ಮುಚ್ಚಲು ಮಂಡಳಿ ಈಗಾಗಲೇ ಆದೇಶ ಹೊರಡಿಸಿರುವುದನ್ನು ವಿಶ್ವನಾಥ ಶೆಟ್ಟಿ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ. ವೃಷಭಾವತಿ ಕಣಿವೆಯ ನೀರಿನ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸಂಬಂಧಪಟ್ಟ ಸರ್ಕಾರದ ಸಂಸ್ಥೆಗಳು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಲಹೆ ಮಾಡಿ ಆರು ವಾರಗಳಲ್ಲಿ ಅರ್ಜಿದಾರರು ಹೆಚ್ಚುವರಿ ಹೇಳಿಕೆ/ ಯೋಜನಾ ವರದಿ ಸಲ್ಲಿಸಬಹುದು. ಇದರಲ್ಲಿ ಕಾರ್ಯಸಾಧು ಎನಿಸುವ ಅಂಶಗಳನ್ನು ಅನುಷ್ಠಾನಗೊಳಿಸಲು ಕಾರ್ಯೋನ್ಮುಖವಾಗಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಚರಂಡಿ ನೀರು ವೃಷಭಾವತಿಗೆ ಹರಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲುಷಿತ ನೀರನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಯೋಜನೆ 2021ರ ವೇಳೆಗೆ ‍ಪೂರ್ಣಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಜಲ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಯಪ್ರಕಾಶ್‌ ವಿವರಿಸಿದರು. ಜಲಮಂಡಳಿಯು ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಯಾವ್ಯಾವ ಸ್ಥಳಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಗತ್ಯವಿದೆ ಎಂದು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಇದೇ ಸಂದರ್ಭದಲ್ಲಿ ಲೋಕಾಯುಕ್ತರಿಗೆ ಸಲ್ಲಿಸಲಾಯಿತು.

ಎಸ್‌ಟಿಪಿ ಅಳವಡಿಸದ ಕೈಗಾರಿಕೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನೀರು ಹಾಗೂ ವಿದ್ಯುತ್‌ ಪೂರೈಕೆ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿ ನೋಟಿಸ್‌ ಜಾರಿಗೊಳಿಸಲಾಗಿದೆ ಎಂಬ ಸಂಗತಿಯನ್ನು ಲೋಕಾಯುಕ್ತರ ಗಮನಕ್ಕೆ ತರಲಾಯಿತು.

ಕಾರ್ಖಾನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಕೊಳಚೆ ನೀರು ಕಣಿವೆಗೆ ಹರಿಯುತ್ತಿರುವುದು ಕಳವಳದ ಸಂಗತಿ. ಇದರಿಂದಾಗಿ ಸುತ್ತಮುತ್ತಲ ಪರಿಸರದ ಜನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ ಎಂದು ವಿಶ್ವನಾಥ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.