ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿ ₹500 ಕೋಟಿ ಮೌಲ್ಯದ 19.98 ಲಕ್ಷ ಟನ್ ಕಬ್ಬಿಣದ ಅದಿರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಶಾಸಕ ಜಿ. ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಿದ್ಧತೆ ನಡೆಸಿದೆ.
ಓಎಂಸಿ ವಹಿವಾಟುಗಳ ಕುರಿತು ತನಿಖೆ ನಡೆಸಿದ್ದ ಸಿಬಿಐ, ಹೈದರಾಬಾದ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿ ಆಧರಿಸಿ ಎಸ್‌ಐಟಿ ತನಿಖೆ ಆರಂಭಿಸಿದೆ. ಈ ಸಂಬಂಧ ರಾಜ್ಯದ ಕೆಲವು ಗಣಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಜನಾರ್ದನ ರೆಡ್ಡಿ ಮತ್ತು ಇತರರನ್ನು ವಿಚಾರಣೆ ನಡೆಸಲು ಪೂರ್ವತಯಾರಿ ಆರಂಭಿಸಿದೆ.
2006ರಿಂದ 2010ರ ಅವಧಿಯಲ್ಲಿ ಓಎಂಸಿ 49 ಶಿಪ್‌ಮೆಂಟ್‌ಗಳಿಂದ ಅಂದಾಜು ₹ 500 ಕೋಟಿ ಮೌಲ್ಯದ ಅದಿರನ್ನು ಚೆನ್ನೈ ಬಂದರಿನ ಮೂಲಕ ರಫ್ತು ಮಾಡಿತ್ತು. ರಾಜ್ಯದ ಆಗಿನ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಕೂಡ ತಮ್ಮ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದ್ದರು. ಓಎಂಸಿಯ ವಹಿವಾಟುಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ಹೈದರಾಬಾದ್ ಘಟಕವು, ‘ಚೆನ್ನೈ ಬಂದರಿನ ಮೂಲಕ ರಫ್ತು ಮಾಡಿರುವ ಅದಿರನ್ನು ಕರ್ನಾಟಕದ ಎಂಬಿಟಿ ಮೈನ್ಸ್, ಹಿಂದ್ ಟ್ರೇಡರ್ಸ್, ಟಪಾಲ್ ನಾರಾಯಣ ರೆಡ್ಡಿ ಮೈನ್ಸ್ ಮತ್ತು ಇತರ ಗಣಿಗಳಿಂದ ಅಕ್ರಮವಾಗಿ ಉತ್ಪಾದನೆ ಮಾಡಲಾಗಿತ್ತು’ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಈ ಕುರಿತು ಲೋಕಾಯುಕ್ತದ ಎಸ್‌ಐಟಿ ಅಧಿಕಾರಿಗಳು, 2022ರ ಜೂನ್‌ನಲ್ಲಿ ಪ್ರಾಥಮಿಕ ವಿಚಾರಣೆ ಆರಂಭಿಸಿದ್ದರು. ದೀರ್ಘ ಕಾಲದಿಂದ ಈ ವಿಚಾರಣೆ ಕುಂಟುತ್ತಾ ಸಾಗಿತ್ತು. ಕೆಲವು ದಿನಗಳಿಂದ ವಿಚಾರಣೆಗೆ ವೇಗ ದೊರಕಿದ್ದು, ಆರೋಪಿಗಳು ಹಾಗೂ ಸಾಕ್ಷಿದಾರರ ವಿಚಾರಣೆ ಆರಂಭವಾಗಿದೆ.
‘ಎಂಬಿಟಿ ಮೈನ್ಸ್, ಹಿಂದ್ ಟ್ರೇಡರ್ಸ್, ಟಪಾಲ್ ನಾರಾಯಣ ರೆಡ್ಡಿ ಮೈನ್ಸ್ ಮತ್ತು ಇತರ ಗಣಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಲವರು ವಿಚಾರಣೆಗೆ ಹಾಜರಾಗಿದ್ದು, ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೂ ಸಲ್ಲಿಸಿದ್ದಾರೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಭಾರತೀಯ ದಂಡ ಸಂಹಿತೆಯ ಜತೆಯಲ್ಲಿ ಗಣಿ ಮತ್ತು ಖನಿಜ ಕಾಯ್ದೆ (ಎಂಎಂಡಿಆರ್) ಅಡಿಯಲ್ಲೂ ಪ್ರಕರಣ ದಾಖಲಿಸಬೇಕಾಗುತ್ತದೆ. ಪ್ರಾಥಮಿಕ ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುತ್ತದೆ. ನ್ಯಾಯಾಲಯದ ಆದೇಶ ಪಡೆದು ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಬೇಕಿದೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು ರಾಜಕಾರಣಿಗಳಿಗೆ ಸಂಕಷ್ಟ?
ಈ ಪ್ರಕರಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಪ್ರಭಾವಿ ರಾಜಕಾರಣಿಗಳ ನಂಟು ಇದೆ. ಜನಾರ್ದನ ರೆಡ್ಡಿ ಅವರೊಂದಿಗೆ ನಿಕಟವಾಗಿದ್ದು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.