ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಗುರುವಾರ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಇರುವ ಕುಂದುಕೊರತೆಗಳನ್ನು ಶೀಘ್ರವೇ ಸರಿಪಡಿಸುವಂತೆ ಕುಲಪತಿ, ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
‘ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಹಲವು ಸಮಸ್ಯೆಗಳಿವೆ ಎಂದು ಕೆಲ ವಿದ್ಯಾರ್ಥಿನಿಯರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸುವ ಸಲುವಾಗಿ ಭೇಟಿ ನೀಡಲಾಯಿತು. ಉಪ ಲೋಕಾಯುಕ್ತರು ವಿದ್ಯಾರ್ಥಿನಿಯರ ಜತೆ ಮಾತನಾಡಿ, ಮಾಹಿತಿ ಪಡೆದುಕೊಂಡರು’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
ಇಬ್ಬರೂ ಉಪ ಲೋಕಾಯುಕ್ತರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಹಾಗೂ ವಿಜ್ಞಾನ ವಿಭಾಗದ ಕಾಲೇಜುಗಳಿಗೆ ಮೊದಲು ಭೇಟಿ ನೀಡಿದರು. ಎರಡೂ ಕಾಲೇಜುಗಳ ಕಟ್ಟಡಗಳು ಹಳೆಯದಾಗಿದ್ದು, ಕೆಲವೆಡೆ ಶಿಥಿಲವಾಗಿವೆ. ಬಣ್ಣಗಳು ಮಾಸಿರುವುದು, ಕಿಟಕಿ–ಬಾಗಿಲುಗಳು ಹಾಳಾಗಿರುವುದು ಮತ್ತು ಗೋಡೆಗಳಲ್ಲಿ ನೀರು ಸೋರುತ್ತಿರುವುದನ್ನು ಗಮನಿಸಿದರು ಎಂದು ಪ್ರಕಟಣೆ ಹೇಳಿದೆ.
ನಂತರ ಈ ಕಾಲೇಜುಗಳ ಮತ್ತು ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ನಿಲಯಗಳಿಗೆ ಭೇಟಿದರು. ಕಟ್ಟಡಗಳು ಹಳತಾಗಿರುವುದು, ಶೌಚಾಲಯಗಳು ಸುಸ್ಥಿತಿಯಲ್ಲಿ ಇಲ್ಲದೇ ಇರುವುದು, ಕ್ಯಾಂಟೀನ್‌ನಲ್ಲಿ ಸರಿಯಾಗಿ ಊಟ ನೀಡದಿರುವುದನ್ನು ಉಪ ಲೋಕಾಯುಕ್ತರು ಗಮನಿಸಿದರು ಎಂದು ಪ್ರಕಟಣೆ ತಿಳಿಸಿದೆ.
‘ಇವುಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು. ಈ ಅವ್ಯವಸ್ಥೆಗಳ ಬಗ್ಗೆ ತನಿಖೆ ನಡೆಸಿ, ವರದಿ ನೀಡಿ’ ಎಂದು ಲೋಕಾಯುಕ್ತದ ಹೆಚ್ಚುವರಿ ರಿಜಿಸ್ಟ್ರಾರ್‌ಗೆ ಸೂಚಿಸಿದರು.
ಸಮಸ್ಯೆಗಳ ಆಗರ
ಮೂರೂ ಕಾಲೇಜುಗಳ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಮತ್ತು ಸ್ನಾನಗೃಹಗಳು ಇಲ್ಲ
ಇರುವ ಶೌಚಾಲಯಗಳು ಮತ್ತು ಸ್ನಾನಗೃಹಗಳು ಶುಚಿಯಾಗಿಲ್ಲ ಮತ್ತು ಸುಸ್ಥಿತಿಯಲ್ಲಿ ಇಲ್ಲ
ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ಪ್ರತಿದಿನ ಒಂದೇ ರೀತಿಯ ಆಹಾರ ನೀಡಲಾಗುತ್ತಿದೆ. ಸಿಹಿ ತಿಂಡಿ ಮೊಟ್ಟೆ ಮತ್ತು ಮಾಂಸಾಹಾರವನ್ನು ನೀಡುತ್ತಿಲ್ಲ
ವಿದ್ಯಾರ್ಥಿನಿಯರಿಗೆ ಮಂಚಗಳನ್ನು ಮಾತ್ರ ಒದಗಿಸಲಾಗಿದ್ದು ನಿಯಮಗಳ ಪ್ರಕಾರ ನೀಡಬೇಕಿದ್ದ ಹಾಸಿಗೆ–ದಿಂಬು ಮತ್ತು ಹೊದಿಕೆಗಳನ್ನು ಒದಗಿಸಿಲ್ಲ
ವಿದ್ಯಾರ್ಥಿನಿಲಯಗಳ ನೀರಿನ ಓವರ್‌ಹೆಡ್ ಟ್ಯಾಂಕ್‌ಗಳು ಶುಚಿಯಾಗಿಲ್ಲ ಮತ್ತು ಸುಸ್ಥಿತಿಯಲ್ಲಿ ಇಲ್ಲ
ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಕಾಯಂ ವಿದ್ಯುತ್ ಸಂಪರ್ಕ ಇಲ್ಲ. ಪರಿಣಾಮವಾಗಿ ಮೊಬೈಲ್ ಲ್ಯಾಪ್‌ಟಾಪ್ ಚಾರ್ಜಿಂಗ್ ಮತ್ತು ಇತರ ಸಾಧನಗಳ ಬಳಕೆ ಸಾಧ್ಯವಾಗುತ್ತಿಲ್ಲ
ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಕೊಳವೆಬಾವಿ ಮತ್ತು ಸಂಪ್ ವ್ಯವಸ್ಥೆ ಇರುವುದಿಲ್ಲ. ಕುಡಿಯುವ ನೀರು ಮತ್ತು ಬಳಕೆಯ ನೀರೂ ಸರಿಯಾಗಿ ಸರಬರಾಜು ಆಗುವುದಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.