ಬೆಂಗಳೂರು: ನಗರದ ಪ್ರಮುಖ ಮಾರ್ಗಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ವಾಹನ ದಟ್ಟಣೆ ತೀವ್ರವಾಗಿತ್ತು. ಇದರಿಂದ ವಾಹನ ಸವಾರರು ಹೈರಾಣಾದರು.
ಮೂರು ದಿನ ರಜೆಯಿದ್ದ ಕಾರಣಕ್ಕೆ ಜನರು ಊರು ಹಾಗೂ ಪ್ರವಾಸಿ ಕೇಂದಗಳತ್ತ ಹೊರಟರು. ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಿಪರೀತ ದಟ್ಟಣೆ ಕಂಡುಬಂತು. ನೆಲಮಂಗಲದ ಟೋಲ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟೋಲ್ ದಾಟಲು ಸಾಕಷ್ಟು ಸಮಯ ಹಿಡಿಯಿತು ಎಂದು ಸವಾರರು ಹೇಳಿದರು.
ಟಿ.ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ, ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು ರಸ್ತೆಯಲ್ಲೂ ವಾಹನಗಳ ಸಾಲಾಗಿ ನಿಂತಿದ್ದು ಕಂಡುಬಂತು.
ಪೀಣ್ಯ ಇಂಡಸ್ಟ್ರಿಯ ಮೆಟ್ರೊ ನಿಲ್ದಾಣದಿಂದ ನಾಗಸಂದ್ರವರೆಗೂ ಶುಕ್ರವಾರ ಮೆಟ್ರೊ ಸಂಚಾರ ಇರಲಿಲ್ಲ. ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರಗೊಳ್ಳಲು ಇದು ಸಹ ಕಾರಣವಾಗಿತ್ತು. ಉತ್ತರ ಭಾಗದ ಬಡಾವಣೆ ಜನರು ಮೆಜೆಸ್ಟಿಕ್‌ನತ್ತ ಬರಲು ಪರದಾಡಿದರು. ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆಯಿಂದ ಬಸ್‌ನಲ್ಲಿ ಬಂದು ಮೆಟ್ರೊ ಹತ್ತಲು ನಾಗಸಂದ್ರದಲ್ಲಿ ಇಳಿದ ಪ್ರಯಾಣಿಕರು ಪರದಾಡಿದರು. ಮತ್ತೆ ಅಲ್ಲಿಂದ ಯಶವಂತಪುರ– ಗೊರಗುಂಟೆಪಾಳ್ಯಕ್ಕೆ ಬಿಎಂಟಿಸಿ ಬಸ್‌ನಲ್ಲಿ ಬಂದು ಮೆಟ್ರೊದಲ್ಲಿ ಸಂಚರಿಸಿದ್ದು ಕಂಡುಬಂತು.
ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಇದರ ವೀಕ್ಷಣೆಗೆ ಹೆಚ್ಚಿನ ಜನರು ಬಂದಿದ್ದರು. ಲಾಲ್‌ಬಾಗ್ ಸುತ್ತಮುತ್ತ ಹೆಚ್ಚಿನ ಜನರು ಕಂಡುಬಂದರು. ಸಾವಿರಾರು ವಾಹನಗಳು ಬಂದ ಕಾರಣಕ್ಕೆ ಪಾರ್ಕಿಂಗ್ ಮಾಡಲು ಸಮಸ್ಯೆ ಎದುರಾಗಿತ್ತು.
ರಿಚ್ಮಂಡ್ ವೃತ್ತ, ಕಾರ್ಪೊರೇಷನ್ ವೃತ್ತ, ರೆಸಿಡೆನ್ಸಿ ರಸ್ತೆ, ಮೆಜೆಸ್ಟಿಕ್, ಕೆ.ಆರ್.ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ದಟ್ಟಣೆ ಕಂಡುಬಂತು. ದಟ್ಟಣೆಯಲ್ಲಿ ಸಿಲುಕಿ ಜನರು ಸುಸ್ತಾದರು. ಚಿಕ್ಕಪೇಟೆಯಲ್ಲಿ ಖರೀದಿಗೆ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.