ಬೆಂಗಳೂರು: ಯುವಜನರಲ್ಲಿ ಉದ್ಯಮಶೀಲತೆ ರೂಪಿಸುವ ದೀರ್ಘಾವಧಿ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಿದೆ ಎಂದು ಭಾರತೀಯ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ (ಅಸೋಚಾಮ್) ಕರ್ನಾಟಕದ ಅಧ್ಯಕ್ಷ ಎಸ್.ಸಂಪತ್‌ರಾಮನ್ ಸಲಹೆ ಮಾಡಿದರು.
ರಾಜ್ಯದ ಹೊಸ ಸರ್ಕಾರದ ಮುಂದಿರುವ ಕಾರ್ಯಸೂಚಿ ಕುರಿತ ವರದಿ ಬಿಡುಗಡೆ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.
ರಾಜ್ಯದಲ್ಲಿ ಉದ್ಯೋಗಾವಕಾಶಗಳು ಇಳಿಮುಖವಾಗಿವೆ. ನಿರ್ದಿಷ್ಟ ಪ್ರದೇಶದ ಜನಸಂಖ್ಯೆ ಸಂಪತ್ತು ಎಂದು ಭಾವಿಸಿದ್ದದ್ದು ಈಗ ಹಾನಿಕಾರಕ ಎಂಬಂತಾಗಿ ಬಿಟ್ಟಿದೆ. ಆದ್ದರಿಂದ ಯುವಜನರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ನವೋದ್ಯಮ ಕೈಗೊಳ್ಳುವ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಸರ್ಕಾರ ಉದ್ಯೋಗ ಮೇಳದ ಮಾದರಿಯಲ್ಲೇ ಉದ್ಯಮಿಗಳ ಮೇಳ ಮಾಡಬಹುದು. ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಉದ್ಯಮ ಅದಾಲತ್ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ್ ಮಾತನಾಡಿ, ‘ಎಂಎಸ್‌ಎಂಇ ಚಟುವಟಿಕೆಗಳಉತ್ತೇಜನಕ್ಕೆ ಕರ್ನಾಟಕ ಹೊಸ ಆವಿಷ್ಕಾರ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಲಿದೆ. ಅದರಲ್ಲಿ ವಿವಿಧ ಕ್ಷೇತ್ರದ ಪರಿಣತರು ಇರಲಿದ್ದಾರೆ. ಸಣ್ಣ ಉದ್ದಿಮೆಗಳಿಗೆ ರಾಜ್ಯ ಹಣಕಾಸು ನಿಗಮದ ಮೂಲಕ ಸಾಲ ಪಡೆಯುವವರಿಗೆ ಶೇ 10ರಷ್ಟು ಬಡ್ಡಿ ವಿನಾಯಿತಿಯನ್ನೂ ನೀಡಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆ ಅಡಿ ಕರ್ನಾಟಕ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಸೇರಿದಂತೆ ಈ ಕ್ಷೇತ್ರಕ್ಕೆ ಇಲಾಖೆಯು ಒಟ್ಟು 16 ಯೋಜನೆಗಳನ್ನು ತಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.