ADVERTISEMENT

ಬೆಂಗಳೂರು: ಲಾರಿ ಕದ್ದು ಗುಜರಿಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:41 IST
Last Updated 1 ಮೇ 2024, 14:41 IST
   

ಬೆಂಗಳೂರು: ನಗರದ ಕೆಲವೆಡೆ ರಸ್ತೆಬದಿ ನಿಲ್ಲಿಸುತ್ತಿದ್ದ ಲಾರಿಗಳನ್ನು ಕದ್ದೊಯ್ದು ಗುಜರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಂಜಯ್‌ ಗಾಂಧಿ ನಗರದ ರಾಜ (24) ಹಾಗೂ ಬಾಹುಬಲಿ ನಗರದ ರಂಜಿತ್‌ ಕುಮಾರ್ (20) ಬಂಧಿತರು. ಇವರಿಂದ ₹ 12 ಲಕ್ಷ ಮೌಲ್ಯದ ಲಾರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೋಲ್ಸ್‌ ಪಾರ್ಕ್‌ ಬಳಿಯ ಪಾರ್ಕಿಂಗ್ ಜಾಗದಲ್ಲಿ ಲಾರಿ ನಿಲ್ಲಿಸಿದ್ದ ಆರೋಪಿಗಳು, ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು, ಇಬ್ಬರನ್ನೂ ಪ್ರಶ್ನಿಸಲು ಮುಂದಾಗಿದ್ದರು. ಪೊಲೀಸರನ್ನು ನೋಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಅನುಮಾನಗೊಂಡ ಪೊಲೀಸರು, ಇಬ್ಬರನ್ನೂ ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದು ವಿಚಾರಿಸಿದಾಗ, ಲಾರಿ ಕಳ್ಳತನದ ಸಂಗತಿ ಗೊತ್ತಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕನಕಪುರ ಮುಖ್ಯರಸ್ತೆಯಲ್ಲಿರುವ ಸಿಲ್ಕ್‌ ಇನ್‌ಸ್ಟಿಟ್ಯೂಟ್ ಕ್ವಾರ್ಟರ್ಸ್ ಬಳಿಯ ಮೆಟ್ರೊ ಪಿಲ್ಲರ್ ಬಳಿ ನಿಲ್ಲಿಸಿದ್ದ ಲಾರಿಯನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಅದನ್ನು ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಲೆಂದು ಭಾರತಿನಗರಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.’

‘ಇಬ್ಬರೂ ಆರೋಪಿಗಳು, ವೃತ್ತಿಯಲ್ಲಿ ಚಾಲಕರು. ಹೆಚ್ಚು ಹಣ ಸಂಪಾದಿಸಲು ಕಳ್ಳತನಕ್ಕೆ ಇಳಿದಿದ್ದರು. ಇದೇ ಆರೋಪಿಗಳು ಮತ್ತಷ್ಟು ಕಡೆ ಲಾರಿ ಕಳ್ಳತನ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.