ADVERTISEMENT

ಹೂಡಿಕೆಯಲ್ಲಿ ನಷ್ಟ: ಕಳ್ಳತನಕ್ಕೆ ಇಳಿದಿದ್ದ ಮಾಜಿ ಸೈನಿಕನ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 15:20 IST
Last Updated 23 ಜುಲೈ 2024, 15:20 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮ್ಯೂಚುವಲ್‌ ಫಂಡ್‌, ಷೇರು ಸೇರಿದಂತೆ ಹಲವೆಡೆ ಹೂಡಿಕೆ ಮಾಡಿ ₹79 ಲಕ್ಷ ಕಳೆದುಕೊಂಡಿದ್ದ ಮಾಜಿ ಸೈನಿಕರೊಬ್ಬರು ನಷ್ಟದ ಹಣವನ್ನು ಗಳಿಸಲು ಕಳ್ಳತನಕ್ಕೆ ಇಳಿದಿದ್ದು, ಅವರನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನ ಎನ್‌. ವಿನಯ್‌ ಬಂಧಿತ.

ADVERTISEMENT

‘ಆರೋಪಿಯಿಂದ ₹5.50 ಲಕ್ಷ ಮೌಲ್ಯದ 73 ಗ್ರಾಂ ಚಿನ್ನದ ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಾಕತೀಯ ನಗರದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಜುಲೈ 15ರಂದು ನೀಡಿದ್ದ ದೂರನ್ನು ಆಧರಿಸಿ, ಕಾರ್ಯಾಚರಣೆ ಆರೋಪಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಪ್ಲಂಬರ್ ಕೆಲಸ ಮಾಡುವುದಾಗಿ ಹೇಳಿಕೊಂಡು ಮನೆಗೆ ನುಗ್ಗಿದ್ದ ಆರೋಪಿ, ಪಿಸ್ತೂಲ್‌ನಿಂದ ಮಹಿಳೆಯ ತಲೆಯ ಹಿಂಭಾಗಕ್ಕೆ ಹೊಡೆದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಸರ ಕಳೆದುಕೊಂಡ ಮಹಿಳೆ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸ್‌ ಸಿಬ್ಬಂದಿ, ಸ್ಥಳೀಯರ ನೆರವು ಪಡೆದು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬೆನ್ನುಹತ್ತಿ ಹಿಡಿದು ಬಂಧಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸೇನೆಯ ವಿಭಾಗವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ನಿವೃತ್ತಯಾದ ಮೇಲೆ ₹31 ಲಕ್ಷ ಬಂದಿತ್ತು. ಆ ಹಣವನ್ನು ಹಲವು ಕಡೆ ಹೂಡಿಕೆ ಮಾಡಿದ್ದರು. ಆ ಹಣ ಕಳೆದುಕೊಂಡ ಮೇಲೆ ಸ್ವಂತ ಜಮೀನು ಮಾರಾಟ ಮಾಡಿ ಅದರಿಂದ ಬಂದ ₹30 ಲಕ್ಷವನ್ನೂ  ಹೂಡಿಕೆ ಮಾಡಿದ್ದರು. ಹೀಗೆ ಒಟ್ಟು ₹79 ಲಕ್ಷವನ್ನು ಕಳೆದುಕೊಂಡಿದ್ದರು. ನಷ್ಟವಾದ ಮೇಲೆ ಕಳ್ಳತನಕ್ಕೆ ಮುಂದಾಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಬಸ್‌ನಲ್ಲಿ ಬರುತ್ತಿದ್ದ ಆರೋಪಿ: ‘ಆಂಧ್ರಪ್ರದೇಶದಿಂದ ಬಸ್‌ನಲ್ಲಿ ಬರುತ್ತಿದ್ದ ಆರೋಪಿ ನಗರದಲ್ಲಿ ಕಳ್ಳತನ ಮಾಡಿ ವಾಪಸ್ ತೆರಳುತ್ತಿದ್ದರು. ಸದ್ಯಕ್ಕೆ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.