ADVERTISEMENT

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಸ್ಫೋಟ

ವ್ಯಕ್ತಿಗೆ ಗಾಯ, ಮನೆಯ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:39 IST
Last Updated 21 ಅಕ್ಟೋಬರ್ 2024, 23:39 IST
ಬಿಟಿಎಂ ಲೇಔಟ್‌ನ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಗೋಡೆ ಕುಸಿದು ಬಿದ್ದಿದೆ
ಬಿಟಿಎಂ ಲೇಔಟ್‌ನ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಗೋಡೆ ಕುಸಿದು ಬಿದ್ದಿದೆ    

ಬೆಂಗಳೂರು: ಬಿಟಿಎಂ ಲೇಔಟ್‌ನ ಮನೆಯೊಂದರಲ್ಲಿ ಸೋಮವಾರ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, 36 ವರ್ಷದ ವ್ಯಕ್ತಿಗೆ ಸುಟ್ಟ ಗಾಯಗಳಾಗಿವೆ.

ಮನೆ ಸಮೀಪದ ಅಪಾರ್ಟ್‌ಮೆಂಟ್‌ಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಪವನ್ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು.

ADVERTISEMENT

ಬೆಳಿಗ್ಗೆ 8.30ರಲ್ಲಿ ಹಾಲು ಬಿಸಿ ಮಾಡಲು ಸಿಲಿಂಡರ್ ಆನ್ ಮಾಡಿದ ಸಂದರ್ಭದಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಸಿಲಿಂಡರ್‌ ಸ್ಫೋಟಗೊಂಡಿದೆ. ಘಟನೆ ನಡೆದ ಸಂದರ್ಭದಲ್ಲಿ ಪವನ್ ಒಬ್ಬರೇ ಇದ್ದರು. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಪಕ್ಕದ ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಉದ್ಯೋಗ ಅರಸಿ ಪವನ್‌ ಬೆಂಗಳೂರಿಗೆ ಬಂದಿದ್ದರು. ಬಿಟಿಎಂ ಲೇಔಟ್‌ನಲ್ಲಿ ಜಾನಕಿ ಎಂಬುವರ ಮನೆಯಲ್ಲಿ ವಾಸವಿದ್ದರು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.