ಬೆಂಗಳೂರು: ‘ಕೇಂದ್ರದಲ್ಲಿ ಕಳೆದ ಹತ್ತು ವರ್ಷದಿಂದ ಬಂಡವಾಳ ಶಾಹಿಗಳನ್ನು ಬೆಂಬಲಿಸುವ ಹಾಗೂ ಕಾರ್ಮಿಕ ವಿರೋಧಿ ಪಕ್ಷವು ಆಡಳಿತದಲ್ಲಿದೆ’ ಎಂದು ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆರೋಪಿಸಿದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಮುಖಂಡರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಣಿಸಲು ಸಂಘಟಿತ ಹೋರಾಟ ರೂಪಿಸುವ ನಿರ್ಣಯವನ್ನು ಕೈಗೊಂಡರು.
ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ರೈತ ವಿರೋಧಿ ಕೃಷಿ ಕಾನೂನು ವಾಪಸ್ ಪಡೆಯುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಹಕ್ಕೊತ್ತಾಯವನ್ನೂ ಮುಖಂಡರು ಮಂಡಿಸಿದರು.
‘ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು. ಎಪಿಎಂಸಿ ವ್ಯವಸ್ಥೆ ಬಲಗೊಳಿಸಬೇಕು. ರಸಗೊಬ್ಬರ ಒಳಗೊಂಡಂತೆ ಕೃಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು’ ಎಂದು ಆಗ್ರಹಿಸಲಾಯಿತು.
‘ರೈಲ್ವೆ, ವಿದ್ಯುತ್ ಒಳಗೊಂಡಂತೆ ಸಾರ್ವಜನಿಕ ಕ್ಷೇತ್ರಗಳ ಎಲ್ಲ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.
‘ಕಾರ್ಮಿಕರಿಗೆ ಕನಿಷ್ಠ ವೇತನವನ್ನು ₹31 ಸಾವಿರಕ್ಕೆ ಏರಿಕೆ ಮಾಡಬೇಕು. ಕಾರ್ಮಿಕರ ಕೌಶಲಕ್ಕೆ ತಕ್ಕಂತೆ ವೇತನ ಹೆಚ್ಚಳ ಮಾಡಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಠ 36 ಗಂಟೆಗಳು ಹಾಗೂ ದಿನದ ಪಾಳಿಯನ್ನು 6 ಗಂಟೆಗೆ ಸೀಮಿತಗೊಳಿಸಬೇಕು. ಅಲ್ಲದೇ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಗಮನ ನೀಡಬೇಕು’ ಎಂದು ಸಭೆಯು ಒತ್ತಾಯಿಸಿತು.
‘ದೀರ್ಘಕಾಲಿಕ ಸ್ವರೂಪದಲ್ಲಿರುವ ಎಲ್ಲ ರೀತಿಯ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದು ಪಡಿಸಬೇಕು. ಗುತ್ತಿಗೆ, ತಾತ್ಕಾಲಿಕ ಕಾರ್ಮಿಕರ ಸೇವೆ ಕಾಯಂಗೊಳಿಸಲು ತಮಿಳುನಾಡು, ಅಸ್ಸಾಂ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು’ ಎಂದು ಸಭೆ ಕೋರಿತು.
‘ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ಬರಬೇಕು. ಇಎಸ್‌ಐ, ಇಪಿಎಫ್, ಗ್ರಾಚ್ಯುಟಿ, ಬೋನಸ್ ಕಾಯ್ದೆಯಲ್ಲಿ ವಿಧಿಸಲಾದ ಎಲ್ಲ ವೇತನ ಮಿತಿ ತೆರವುಗೊಳಿಸಬೇಕು. ಪ್ರತಿ ಜಿಲ್ಲಾಮಟ್ಟದಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು. ಕೈಗಾರಿಕಾ ವಿವಾದಗಳನ್ನು ನಿರ್ದಿಷ್ಟವಾಗಿ ಕಾಲಮಿತಿ ಒಳಗೆ ಇತ್ಯರ್ಥಗೊಳ್ಳಲು ಸೂಕ್ತ ಕಾನೂನು ತಿದ್ದುಪಡಿಗಾಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೇಂದ್ರ ಸರ್ಕಾರವು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ(ಒಎಸ್‌ಎಚ್ ಕೋಡ್)ಯ ಕುರಿತು ಅನಧಿಕೃತವಾಗಿ ಸಭೆ ನಡೆಸಿದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಸುರಕ್ಷತೆಯಿತ್ತು. ಅದನ್ನು ವಾಪಸ್ ಪಡೆಯುವ ಷಡ್ಯಂತ್ರ ನಡೆಯುತ್ತಿದೆ. ಇದು ಖಂಡನಾರ್ಹ. ಚುನಾವಣೆ ಹೊತ್ತಿನಲ್ಲೂ ಕಾರ್ಯಾಂಗವು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಆಪಾದಿಸಿದರು.
ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮುಖಂಡರಾದ ಎಚ್.ಎಸ್.ಸುನಂದಾ, ಕೆ.ಪ್ರಕಾಶ್, ಮಹಾಂತೇಶ್ ಹಾಜರಿದ್ದರು.
Cut-off box - ಸಿಐಟಿಯುನ ಇತರೆ ಹಕ್ಕೊತ್ತಾಯಗಳು... * ಎಲ್ಲ ಮಾದರಿ ಕಾರ್ಮಿಕರಿಗೂ ವಸತಿ ಯೋಜನೆ ಜಾರಿಗೊಳಿಸಿ * ವಿಮಾ ಏಜೆಂಟರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ‘ಕಲ್ಯಾಣ ನಿಧಿ’ ‘ಪಿಂಚಣಿ ಯೋಜನೆ’ ಜಾರಿಗೆ ಆಗ್ರಹ * ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಪರಿಹಾರ ಯೋಜನೆ ರೂಪಿಸಿ * ಉದ್ಯೋಗ ಖಾತ್ರಿ: ದಿನಗೂಲಿ ಮೊತ್ತ ₹700ಕ್ಕೆ ಏರಿಸಿ * ಉಚಿತ ಶಿಕ್ಷಣ ದೊರೆಯಬೇಕು * ಎನ್‌ಇಪಿ ನಿಲ್ಲಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.