ADVERTISEMENT

LS Polls 2024: ಪ್ರಚೋದನಾಕಾರಿ ವಿಡಿಯೊ; ನಡ್ಡಾ, ವಿಜಯೇಂದ್ರಗೆ ಪೊಲೀಸ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 8 ಮೇ 2024, 12:56 IST
Last Updated 8 ಮೇ 2024, 12:56 IST
<div class="paragraphs"><p>ಬಿ.ವೈ.ವಿಜಯೇಂದ್ರ ಹಾಗೂ ಜೆ.ಪಿ.ನಡ್ಡಾ</p></div>

ಬಿ.ವೈ.ವಿಜಯೇಂದ್ರ ಹಾಗೂ ಜೆ.ಪಿ.ನಡ್ಡಾ

   

ಬೆಂಗಳೂರು: ಪ್ರಚೋದನಾಕಾರಿ ವಿಡಿಯೊ ಪೋಸ್ಟ್ ಅಪ್‌ಲೋಡ್ ಮಾಡಿದ್ದ ಆರೋಪದಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಮೂವರು ಮುಖಂಡರಿಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

‘ವಿಡಿಯೊಗೆ ಸಂಬಂಧಪಟ್ಟಂತೆ ಮೇ 5ರಂದು ಪ್ರಕರಣ ದಾಖಲಾಗಿದೆ. ಇದರ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯಾ ಅವರಿಗೆ ಸಿಆರ್‌ಪಿಸಿ 41(ಎ) ಅಡಿ ಮೇ 6ರಂದು ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದೆ. ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬಿಜೆಪಿಯ ಅಧಿಕೃತ ಖಾತೆಯಲ್ಲಿ  ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿ, ‘ಎಚ್ಚರ... ಎಚ್ಚರ... ಎಚ್ಚರ...’ ಎಂದು ಬರೆಯಲಾಗಿತ್ತು. ‘ಸಮಾಜದಲ್ಲಿ ಎರಡು ವರ್ಗಗಳ ನಡುವೆ ದ್ವೇಷವನ್ನುಂಟು ಮಾಡುವ ಹಾಗೂ ವೈಷಮ್ಯ ಮೂಡಿಸುವ ಉದ್ದೇಶದಿಂದ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ’ ಎಂಬುದಾಗಿ ಆರೋಪಿಸಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ದೂರು ನೀಡಿದ್ದರು.

‘ನಡ್ಡಾ, ವಿಜಯೇಂದ್ರ ಹಾಗೂ ಅಮಿತ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ಮೂವರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ, ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.