ADVERTISEMENT

ಧೂಮಪಾನ | ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಳವಳ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:13 IST
Last Updated 31 ಜುಲೈ 2024, 15:13 IST
.
.   

ಬೆಂಗಳೂರು: ‘ಧೂಮಪಾನ, ವಾಯು ಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷ ವರದಿಯಾದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 5.9 ರಷ್ಟು ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ. 

ಆಗಸ್ಟ್‌ 1ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಪ್ರಯುಕ್ತ ಸಂಸ್ಥೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. 

‘ರಾಜ್ಯದಲ್ಲಿ 2023ರಲ್ಲಿ 88,873 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 5,272 ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್‌. ಬೆಂಗಳೂರಿನಲ್ಲಿ ಸರಾಸರಿ 900ಕ್ಕೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿವೆ. ಪುರುಷರಲ್ಲಿ ಶೇ 9.6 ರಷ್ಟು ಹಾಗೂ ಮಹಿಳೆಯರಲ್ಲಿ ಶೇ 3.2 ರಷ್ಟು‌ ಪ್ರಕರಣಗಳು ಈ ಮಾದರಿಯ ಕ್ಯಾನ್ಸರ್ ಪ್ರಕರಣಗಳಾಗಿವೆ’ ಎಂದು ಸಂಸ್ಥೆ ತಿಳಿಸಿದೆ. 

ADVERTISEMENT

‘ಧೂಮಪಾನ ಮಾಡುವವರಲ್ಲಿ ಹೆಚ್ಚಾಗಿ ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ವಾಯು ಮಾಲಿನ್ಯದಿಂದಲೂ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ. ಇದು ಬರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ತಂಬಾಕು ಉತ್ಪನಗಳ ಸೇವನೆ ಮತ್ತು ಧೂಮಪಾನ ತ್ಯಜಿಸಬೇಕು’ ಎಂದು ಹೇಳಿದೆ. 

‘ಸಂಸ್ಥೆಯಲ್ಲಿ 2023ರಲ್ಲಿ 721 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ದೀರ್ಘಕಾಲದ ಕೆಮ್ಮು, ಕೆಮ್ಮಿನಲ್ಲಿ ರಕ್ತ ಅಥವಾ ಕಫ ಕಾಣಿಸಿಕೊಳ್ಳುವುದು, ಉಸಿರಾಟ ತೊಂದರೆ, ಎದೆನೋವು, ಧ್ವನಿಯಲ್ಲಿ ಒರಟುತನ ಹೆಚ್ಚುವುದು, ಬಳಲಿಕೆ ಮತ್ತು ನಿಶ್ಯಕ್ತಿ, ಹಸಿವು ಮತ್ತು ತೂಕ ನಷ್ಟ ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ಇದರ ಬಗ್ಗೆ ಅರಿವು ಮೂಡಿಸಲು ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದೆ. 

‘ಕ್ಯಾನ್ಸರ್ ಹೊಸ ಪ್ರಕರಣಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. 2025ಕ್ಕೆ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 91,622ಕ್ಕೆ ತಲುಪುವ ಸಂಭವವಿದೆ. ಬೆಂಗಳೂರಿನಲ್ಲಿ 20,098 ಪ್ರಕರಣಗಳು ವರದಿಯಾಗಬಹುದು’ ಎಂದು ಸಂಸ್ಥೆ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.