ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ

ಅಮೆರಿಕಾದ ಸೆಮಿಕಂಡಕ್ಟರ್‌ ಉದ್ಯಮದ ಮುಖ್ಯಸ್ಥರೊಂದಿಗೆ ಪಾಟೀಲ ಮಾತುಕತೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 23:13 IST
Last Updated 1 ಅಕ್ಟೋಬರ್ 2024, 23:13 IST
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಜಾಗತಿಕ ಕಂಪನಿಗಳ ಮುಖ್ಯಸ್ಥರನ್ನು ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಚಿವ ಎಂ.ಬಿ. ಪಾಟೀಲ ಆಹ್ವಾನಿಸಿದರು
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಜಾಗತಿಕ ಕಂಪನಿಗಳ ಮುಖ್ಯಸ್ಥರನ್ನು ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಚಿವ ಎಂ.ಬಿ. ಪಾಟೀಲ ಆಹ್ವಾನಿಸಿದರು   

ಬೆಂಗಳೂರು: ಅಮೆರಿಕದ ಪ್ರಮುಖ ಸೆಮಿ ಕಂಡಕ್ಟರ್‌ ಉದ್ಯಮಗಳ ಪ್ರತಿನಿಧಿಗಳನ್ನು ನ್ಯೂಯಾರ್ಕ್‌ನಲ್ಲಿ ಮಂಗಳವಾರ ಭೇಟಿ ಮಾಡಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ರಾಜ್ಯ ಸರ್ಕಾರ ಆಯೋಜಿಸಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಅಲ್ಲಿನ ಉದ್ಯಮಿಗಳಿಗೆ ಆಹ್ವಾನ ನೀಡಿದರು.

‘ರಾಜ್ಯದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅಮೆರಿಕದ ಕಂಪನಿಗಳ ಜೊತೆಗೆ ಹೆಚ್ಚಿನ ಸಹಯೋಗದ ಅವಕಾಶಗಳನ್ನು ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಸೆಮಿಕಂಡಕ್ಟರ್‌ ಉದ್ಯಮಗಳ ಅಭಿವೃದ್ಧಿಗೆ ಈ ಭೇಟಿಯು ನೆರವಾಗಲಿದೆ’ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಸೆಮಿಕಂಡಕ್ಟರ್ ಉದ್ದಿಮೆಗೆ ಚೇತರಿಕೆ ನೀಡುವ ಉದ್ದೇಶದಿಂದ, ಅಮೆರಿಕದ ಸೆಮಿಕಂಡಕ್ಟರ್‌ ವಲಯದ ನಾಲ್ಕು ಪ್ರಮುಖ ಕಂಪನಿಗಳಾದ ಯುಜೆನಸ್ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆಡಬ್ಲ್ಯು ಕಿಮ್, ಲ್ಯಾಮ್ ರಿಸರ್ಚ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ ಲಾರ್ಡ್, ಅಲ್ಫಾವೇವ್ ಸೆಮಿ ಕಂಪನಿಯ ಸಿಇಒ ಟೋನಿ ಪಿಯಾಲಿಸ್ ಮತ್ತು ಎಂಐಪಿಎಸ್‌ ಟೆಕ್ನಾಲಜೀಸ್‌ನ ಸಿಇಒ ಸಮೀರ್ ವಾಸನ್ ಅವರೊಂದಿಗೆ ಪಾಟೀಲ ಸಮಾಲೋಚನೆ ನಡೆಸಿದರು. ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಈ ಉದ್ದಿಮೆಗಳ ಪ್ರಮುಖರಿಗೆ ಆಹ್ವಾನವನ್ನೂ ನೀಡಿದರು.

ADVERTISEMENT

ಉದ್ಯಮಿಗಳ ಭೇಟಿ ಹಾಗೂ ಸಮಾಲೋಚನೆ ಸಭೆಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಹೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.