ಬೆಂಗಳೂರು: ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ದಲಿತರ ಮೇಲಿನ ದೌಜನ್ಯ ಕಡಿಮೆ ಆಗಿಲ್ಲ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘಟನೆಗಳ ಒಕ್ಕೂಟ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯವು 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರು ಅಪರಾಧಿಗಳಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಆದೇಶವನ್ನು ದಲಿತ ಸಂಘಟನೆಗಳ ಒಕ್ಕೂಟ ಸ್ವಾಗತಿಸಲಿದೆ. ಹಲವು ವರ್ಷಗಳ ಹೋರಾಟಕ್ಕೆ ಜಯ ದೊರೆತಿದೆ ಮತ್ತು ದಲಿತ ಸಮುದಾಯದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಬೇಕು. ಸಮಾಜದಲ್ಲಿ ಎಲ್ಲಾ ವರ್ಗಗಳಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಸಮತಾ ಸೈನಿಕ ದಳದ ಸಂಚಾಲಕ ಡಿ.ಎಂ.ಅಂಬರೀಷ್ ಮಾತನಾಡಿ, ‘ದಲಿತ ಸಮುದಾಯದ ಬಹುಮುಖ್ಯ ಜವಾಬ್ದಾರಿ ಸಮಾನತೆ ಸಾಧಿಸುವುದು. ಇದು ಅಂಬೇಡ್ಕರ್ ಅವರ ಸಂದೇಶವಾಗಿತ್ತು. ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಆದೇಶವು ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ’ ಎಂದರು.
ಸಮತಾ ಸೈನಿಕ ದಳದ ರಾಷ್ಟ್ರೀಯ ಸಮಿತಿ ಸದಸ್ಯ ನರಸಿಂಗ ಪಟೇಲ್, ಡಿಎಸ್‌ಎಸ್ ಭೀಮನಡಿಗೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ಛಲವಾದಿ ಯುವ ಬ್ರಿಗೇಡ್ ಅಧ್ಯಕ್ಷ ಛಲವಾದಿ ಸೂರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.