ADVERTISEMENT

ಬೆಂಗಳೂರು ಕೃಷಿ ಮೇಳ | ಕೃಷಿ ಯಂತ್ರಗಳತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 0:03 IST
Last Updated 16 ನವೆಂಬರ್ 2024, 0:03 IST
ಕಳೆ ತೆಗೆಯುವ ವಿವಿಧ ಯಂತ್ರಗಳನ್ನು ಪರೀಕ್ಷಿಸುತ್ತಿರುವ ರೈತರು
ಕಳೆ ತೆಗೆಯುವ ವಿವಿಧ ಯಂತ್ರಗಳನ್ನು ಪರೀಕ್ಷಿಸುತ್ತಿರುವ ರೈತರು   

ಬೆಂಗಳೂರು: ಮಳೆ ಬಿಡುವು‌ ಕೊಟ್ಟಿತ್ತು, ನಿನ್ನೆಯ ಮಳೆಯ ಕುರುಹಾಗಿ ಮಳಿಗೆಗಳ ಅಂಗಳದಲ್ಲಿ ಕೆಸರು ಹಾಗೇ ಉಳಿದಿತ್ತು.. ಆದರೆ ಮೇಳದಲ್ಲಿ, ಕೃಷಿ ಯಂತ್ರೋಪಕರಣಗಳ ಮಳಿಗೆಗಳಲ್ಲಿ ಜನವೋ ಜನ...

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಎರಡನೇ ದಿನವಾದ ಶುಕ್ರವಾರದಂದು ಮೇಳದ ಅಂಗಳದಲ್ಲಿನ ದೃಶ್ಯಗಳಿವು.

ಕೈಯಲ್ಲೊಂದು ಚೀಲ, ಹೆಗಲಲ್ಲೊಂದು ಬ್ಯಾಕ್ ಪ್ಯಾಕು, ಕೈತುಂಬಾ ಮಾಹಿತಿ ಪತ್ರಗಳ ರಾಶಿ, ಕಣ್ಣುಗಳು ಮಾತ್ರ ಯಂತ್ರಗಳನ್ನ್ನು ಹುಡುಕುತ್ತಿದ್ದವು.

ಕಾರ್ಮಿಕರ ಕೊರತೆಯಿಂದ ಹೈರಾಣಾದವರು, ‘ನಮ್ಮ ಕೆಲಸಕ್ಕೆ ಬರುವಂತಹ ಯಂತ್ರಗಳಿವೆಯೇ’ ಎಂದು ಹುಡುಕಾಟ ನಡೆಸುತ್ತಿದ್ದರು. ಮಳಿಗೆಗೆ ಭೇಟಿ‌ ನೀಡಿದವರು ಅಲ್ಲೇ ಯಂತ್ರ ಬಳಸಿ ನೋಡಿ, ಎದುರಾದ ಸಂದೇಹಗಳಿಗೆ ಉತ್ತರ ಪಡೆದುಕೊಂಡರು. ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಬಹು–ಬೆಳೆ ಯಂತ್ರೋಪಕರಣ, ಸಿರಿಧಾನ್ಯ ಸಂಸ್ಕರಿಸುವ ಯಂತ್ರಗಳ ಬಗ್ಗೆ ಮಾಹಿತಿ ಪಡೆದರು. ಸಬ್ಸಿಡಿ ದರದಲ್ಲಿ ಯಂತ್ರಗಳ ಖರೀದಿ ಬಗ್ಗೆ ಹೆಚ್ಚು ವಿಚಾರಿಸುತ್ತಿದ್ದರು.

ADVERTISEMENT

ತೋಟದೊಳಗೆ ವಸ್ತುಗಳನ್ನು ಸಾಗಿಸುವ ಬುಲೆಟ್ ಕಾರ್ಟ್, ಕೈಚಾಲಿತ ಕಮ್ ಮೋಟಾರ್ ಚಾಲಿತ ಗಾಡಿಗಳು, ಕಡಿಮೆ ಶ್ರಮದಲ್ಲಿ ಏಕಕಾಲಕ್ಕೆ ಹೆಚ್ಚು ಜಾಗದಲ್ಲಿ ಕಳೆ ತೆಗೆಯುವ ಮೂರು ಬ್ರಷ್‌ಗಳಿರುವ ಕೈ ಚಾಲಿತ ಬ್ರಷ್ ಕಟರ್‌, ಗದ್ದೆ, ಅಡಿಕೆ, ತೆಂಗಿನ ತೋಟಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಳೆ ತೆಗೆಯುವ ಹತ್ತಾರು ವಿಧದ ಯಂತ್ರಗಳನ್ನು ರೈತರು ಪರಿಶೀಲಿಸುತ್ತಿದ್ದರು. ಕೆಲವರು ಸ್ಥಳದಲ್ಲೇ ಬೇಡಿಕೆ ಸಲ್ಲಿಸುತ್ತಿದ್ದರು.

ಕೃಷಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ನೆಲದ ತೇವಾಂಶ ಅಳೆಯುವ ಹಾಗೂ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಸುವ ‘ಸೆನ್ಸರ್‌’ ಆಧಾರಿತ ಸಾಧನಗಳ ಮಾದರಿ ರೈತರನ್ನು ಸೆಳೆಯಿತು. ಒಂದಷ್ಟು ಮಂದಿ ‘ಈ ಉಪಕರಣ ಎಲ್ಲಿ ಸಿಗುತ್ತದೆ’ ಎಂದು ಕೇಳಿದರೆ, ಕೆಲವರು ‘ಇಂಥ ಯಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯಗಳೂ‌ ಆವಿಷ್ಕರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ತಿಳಿಸುವ ಸೆನ್ಸರ್ ಆಧಾರಿತ ಸಾಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.