ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್.ಕಾಂತರಾಜ ಅವರ ಅವಧಿ ಪೂರ್ಣಗೊಂಡ ಬಳಿಕ ಜಯಪ್ರಕಾಶ್ ಹೆಗ್ಡೆ ಆಯೋಗದ ಅಧ್ಯಕ್ಷರಾಗಿದ್ದಾರೆ. ಆರ್ಥಿಕ, ಸಾಮಾಜಿಕ ವರದಿಯನ್ನು ಸಲ್ಲಿಸುವುದಕ್ಕಾಗಿ ಅವರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
‘ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಗೊತ್ತಾಗದೇ ಇದ್ದರೆ ಸರಿಯಾಗಿ ಬಜೆಟ್ ರೂಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜನರ ಸ್ಥಿತಿಗತಿ ಅರಿಯಲು ನಾನು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲಿಯೇ ಪ್ರಥಮ ಬಾರಿಗೆ ಸಮೀಕ್ಷೆಗೆ ಚಾಲನೆ ನೀಡಿದೆ. ಕಾಂತರಾಜ ಆಯೋಗದ ವರದಿಯನ್ನು ಸ್ವೀಕರಿಸುತ್ತೇವೆ. ಅದರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸುತ್ತೇವೆ. ಸ್ವೀಕರಿಸುವ ಮೊದಲೇ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ’ ಎಂದು ತಿಳಿಸಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ವರದಿ ಪೂರ್ಣಗೊಂಡಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವರದಿ ಪೂರ್ಣಗೊಂಡರೂ ಅವರು ಸ್ವೀಕರಿಸಲಿಲ್ಲ. ಬಳಿಕ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೂ ಸ್ವೀಕರಿಸಲಿಲ್ಲ’ ಎಂದು ಟೀಕಿಸಿದರು.
ಜಾತಿ ವ್ಯವಸ್ಥೆ, ಅಸ್ಪೃಷ್ಯತೆ, ವರ್ಗ, ಮೌಢ್ಯ, ಕರ್ಮ ಸಿದ್ಧಾಂತ ತಿರಸ್ಕರಿಸಿದವರು ಬಸವಾದಿ ಶರಣರು. ಅವರಲ್ಲಿ 354 ವಚನಗಳನ್ನು ರಚಿಸಿರುವ ಮಡಿವಾಳ ಮಾಚಿದೇವ ಅವರು ಎಲ್ಲರ ವಚನಗಳನ್ನು ಸಂರಕ್ಷಿಸಿದವರು. ಅದಕ್ಕಾಗಿ ಬಸವಣ್ಣರಿಗೆ ಮಾಚಿದೇವರು ನೆಚ್ಚಿನ ಶರಣರಾಗಿದ್ದರು ಎಂದರು.
‘ಸಮಸಮಾಜ ಇದ್ದರೆ ಶೋಷಣೆಗೆ ಅವಕಾಶ ಇರುವುದಿಲ್ಲ. ಅಸಮಾನತೆಯ ಸಮಾಜ ಇದ್ದಾಗ ಮಾತ್ರ ಶೋಷಣೆ ಮಾಡಲು ಸಾಧ್ಯ. ಸಂವಿಧಾನವು ಸಮಸಮಾಜ ನಿರ್ಮಾಣದ ಆಶಯವನ್ನು ಹೊಂದಿದೆ. ಶೋಷಣೆ ಬಯಸುವವರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಸಂವಿಧಾನ ವಿರೋಧಿಸುವವರು ನಮ್ಮ ವೈರಿಗಳು’ ಎಂದು ಟೀಕಿಸಿದರು.
‘ನಮಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳು ಇನ್ನೂ ದೊರೆಯದೇ ಇದ್ದಿರಬಹುದು. ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನ ನೀಡಿದೆ. ಎಲ್ಲರೂ ಶಿಕ್ಷಣ ಪಡೆಯಬೇಕು. ಸಂಘಟಿತರಾಗಬೇಕು. ಹಕ್ಕುಗಳಿಗೆ ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.
ಕೆಂಗೇರಿ ಮಠದ ಶಿವಯೋಗಾನಂದ ಮಹಾಪುರಿ ಸ್ವಾಮೀಜಿ, ಮೂಡಬಿದರೆ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ, ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ, ಎಚ್. ರವಿಕುಮಾರ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಿವಕುಮಾರ್ ಉಪಸ್ಥಿತರಿದ್ದರು. ಯಡಿಯೂರು ಮೂಡಲಗಿರಿಯಪ್ಪ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.