ಬೆಂಗಳೂರು: ಬಿಸಿಲು–ಮಳೆ, ಮೋಡ ಕವಿದ ವಾತಾವರಣದಿಂದಾಗಿ ನಗರದಲ್ಲಿ ‘ಕಂಜಕ್ಟಿವೈಟಿಸ್’ (ಮದ್ರಾಸ್ ಐ) ಪ್ರಕರಣ ಹೆಚ್ಚಳವಾಗಿದ್ದು, ನೇತ್ರ ಚಿಕಿತ್ಸಾಲಯಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 20 ರಷ್ಟು ಮಂದಿಯಲ್ಲಿ ಈ ಸಮಸ್ಯೆ ದೃಢಪಡುತ್ತಿದೆ.
ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಗೆ ಜನ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ, ನಾರಾಯಣ ನೇತ್ರಾಲಯ, ಡಾ.ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಬೆಂಗಳೂರು ನೇತ್ರಾಲಯದಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ.
ಕಳೆದೊಂದು ತಿಂಗಳಿಂದ ನಗರದಲ್ಲಿ ಬಿಸಿಲು–ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿದೆ. ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದರೆ, ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಇದರಿಂದಾಗಿ ಚಳಿಯ ವಾತಾವರಣವಿದ್ದು, ವೈರಾಣು ವೇಗವಾಗಿ ಹರಡಲಾರಂಭಿಸಿದೆ. ‘ಮದ್ರಾಸ್ ಐ’ ಸಮಸ್ಯೆ ಹಿರಿಯರಿಗಿಂತಲೂ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಮಿಂಟೊ ಆಸ್ಪತ್ರೆಗೆ ಪ್ರತಿ ನಿತ್ಯ 400ರಿಂದ 600 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ಅವರಲ್ಲಿ 90ರಿಂದ 100 ರೋಗಿಗಳಲ್ಲಿ ಈ ಸಮಸ್ಯೆ ದೃಢಪಡುತ್ತಿದೆ. ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ ಸರಾಸರಿ 20 ಪ್ರಕರಣಗಳು ವರದಿಯಾಗುತ್ತಿವೆ.
ಹರಡುವಿಕೆ ತಡೆಗಟ್ಟಿ: ‘ಕಣ್ಣಿನ ಸಮಸ್ಯೆ ಚಿಕಿತ್ಸೆಗೆ ಬರುತ್ತಿರುವ ಪ್ರತಿ ಹತ್ತು ಮಂದಿಯಲ್ಲಿ ಇಬ್ಬರು ‘ಕಂಜಕ್ಟಿವೈಟಿಸ್’ ಸಮಸ್ಯೆ ಎದುರಿಸುತ್ತಿರುವವರಾಗಿದ್ದಾರೆ. ಈ ಸಮಸ್ಯೆ ಇರುವವರಲ್ಲಿ ಕೆಲವರಿಗೆ ನೆಗಡಿ, ಗಂಟಲು ಊತ ಸಹ ಇರುತ್ತವೆ. ಒಂದು ತಿಂಗಳಿಂದ ಈ ಪ್ರಕರಣ ಹೆಚ್ಚಳವಾಗಿದೆ. ಆಸ್ಪತ್ರೆಗಳಲ್ಲಿಯೂ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ ಉಪಕರಣಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅವರು ಪದೇ ಪದೆ ಕಣ್ಣುಗಳನ್ನು ಮುಟ್ಟಿಕೊಳ್ಳುವುದು ಹಾಗೂ ಶಾಲೆಗಳಲ್ಲಿ ಪೆನ್ನು, ಪುಸ್ತಕಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು ಮುಖ್ಯ ಕಾರಣ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿಯೂ ಆಗಿರುವ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.
‘ಎರಡು ವಾರಗಳಿಂದ ಹೆಚ್ಚಿನ ಹೊರರೋಗಿಗಳಲ್ಲಿ ‘ಕಂಜಕ್ಟಿವೈಟಿಸ್’ ದೃಢಪಡುತ್ತಿದೆ. ಇದು ಕಣ್ಣಿನ ನೀರು, ಸ್ಪರ್ಶದಿಂದ ಹೆಚ್ಚಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತ ರೋಗಿ ಬಳಸಿದ ವಸ್ತುಗಳನ್ನು ಬೇರೆಯವರು ಉಪಯೋಗಿಸಬಾರದು’ ಎಂದು ಡಾ.ಅಗರವಾಲ್ಸ್ ಐ ಹಾಸ್ಪಿಟಲ್‌ನ ನೇತ್ರ ತಜ್ಞ ಡಾ. ಗಿರೀಶ್ ರೆಡ್ಡಿ ತಿಳಿಸಿದರು.
ಈ ಅವಧಿಯಲ್ಲಿ ಮಳೆ ತಂಪು ವಾತಾವರಣದಿಂದ ವೈರಾಣು ಸಕ್ರಿಯವಾಗಿ ಇರುತ್ತದೆ. ಕಣ್ಣು ಕೆಂಪಾದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು.ಡಾ. ಸುಜಾತಾ ರಾಥೋಡ್ ಮಿಂಟೊ ಆಸ್ಪತ್ರೆ ನಿರ್ದೇಶಕಿ
ವಾತಾವರಣದಲ್ಲಿ ತಂಪು ಇರುವುದರಿಂದ ವೈರಾಣು ಹೆಚ್ಚು ಅವಧಿ ಜೀವಂತವಾಗಿ ಉಳಿದು ಹರಡಲಿದೆ. ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಿ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ಡಾ. ಯತೀಶ್ ಎಸ್. ನಾರಾಯಣ ನೇತ್ರಾಲಯದ ನೇತ್ರ ತಜ್ಞ
‘ಕಂಜಕ್ಟಿವೈಟಿಸ್’ ಪ್ರಮುಖ ಲಕ್ಷಣಗಳು
* ಕಣ್ಣುಗುಡ್ಡೆಯ ಊತ
* ರೆಪ್ಪೆ ಅಂಟಿಕೊಳ್ಳುವುದು
* ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು
* ಕಣ್ಣಲ್ಲಿ ಅತಿಯಾಗಿ ನೀರು ಬರುವಿಕೆ
* ಕಣ್ಣು ಅತಿಯಾಗಿ ತುರಿಕೆ ಆಗುವಿಕೆ
* ಕಣ್ಣುಗಳ ನಿರಂತರ ಅಸ್ವಸ್ಥತೆ ವೈದ್ಯರು ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳು
* ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು
* ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ತಡೆಯಬೇಕು
* ಕೈಗಳಿಂದ ಕಣ್ಣುಗಳ ಸ್ಪರ್ಶ ತಡೆಯಲು ಕನ್ನಡಕ ಹಾಕಿಕೊಳ್ಳಬಹುದು
* ಕಣ್ಣುಗಳ ಆಯಾಸ ತಡೆಯಲು ಟಿ.ವಿ ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು
* ಸೋಂಕಿತ ವ್ಯಕ್ತಿ ಬಳಸಿದ ಟವೆಲ್ ಸೇರಿ ವಿವಿಧ ವಸ್ತುಗಳನ್ನು ಬಳಸದಿರುವುದು
* ಸೋಂಕಿತ ವ್ಯಕ್ತಿ ಹೊರಗಡೆ ತೆರಳದಿರುವುದು
* ವೈದ್ಯರ ಸಲಹೆ ಪಡೆದು ಕಣ್ಣಿನ ಔಷಧಗಳನ್ನು ಬಳಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.